ಬೆಂಗಳೂರು: ಅಪಘಾತಕ್ಕೀಡಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟ ಸಂಚಾರಿ ವಿಜಯ್ ವಿಧಿವಶರಾಗಿದ್ದಾರೆ.
ಬೆಂಗಳೂರಿನ ಜೆ.ಪಿ.ನಗರ ಬಳಿ ಭಾನುವಾರ ಸಂಚಾರಿ ವಿಜಯ್ ತೆರಳುತ್ತಿದ್ದ ವಾಹನ ಅಫಘಾತಕ್ಕೀಡಾಗಿತ್ತು. ತಲೆಗೆ ಬಲವಾದ ಏಟು ಬಿದ್ದಿದ್ದರಿಂದಾಗಿ ಅವರು ಕೋಮಾ ಸ್ಥಿತಿಗೆ ತಲುಪಿದ್ದರು. ಅವರಿಗೆ ನಿರಂತರ ಚಿಕಿತ್ಸೆ ನೀಡಲಾಯಿತಾದರೂ ಮೆದುಳು ನಿಷ್ಕ್ರಿಯಗೊಂಡಿದ್ದರಿಂದ ಅವರು ಬದುಕುಳಿಯಲಿಲ್ಲ.
ಸಂಚಾರಿ ವಿಜಯ್ (37) ಅವರ ಅಂಗಾಂಗ ದಾನ ಮಾಡಿರುವುದರಿಂದ ಆ ಪ್ರಕ್ರಿಯೆ ನಂತರ ಇಂದು ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಚಾರಿ ವಿಜಯ್ ಅವರ ಪಾರ್ಥಿವ ಶರೀರವನ್ನು ಇಟ್ಟು ಸಾರ್ವಜನಿಕರಿಗೆ ಅಂತಿಮ ದರ್ಶನ ಮಾಡಲು ಅವಕಾಶ ನೀಡಲಾಯಿತು. ನಟರಾದ ಶಿವರಾಜ್ ಕುಮಾರ್, ರಂಗಾಯಣ ರಘು, ನೀನಾಸಂ ಸತೀಶ್, ನಾಗತಿಹಳ್ಳಿ ಚಂದ್ರಶೇಖರ್, ಮುಖ್ಯಮಂತ್ರಿ ಚಂದ್ರು ಸಹಿತ ಚಿತ್ರೋದ್ಯಮದ ಗಣ್ಯರನೇಕರು ಅಂತಿಮ ದರ್ಶನ ಪಡೆದರು.