ಬೆಂಗಳೂರು: ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಸಂಚಾರಿ ವಿಜಯ್ ಇನ್ನು ನೆನಪು ಮಾತ್ರ.. ಅಪಘಾತಕ್ಕೀಡಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟ ಸಂಚಾರಿ ವಿಜಯ್ ವಿಧಿವಶರಾಗಿದ್ದಾರೆ.
ಬೆಂಗಳೂರಿನ ಜೆ.ಪಿ.ನಗರ ಬಳಿ ಭಾನುವಾರ ಸಂಚಾರಿ ವಿಜಯ್ ತೆರಳುತ್ತಿದ್ದ ವಾಹನ ಅಫಘಾತಕ್ಕೀಡಾಗಿತ್ತು. ತಲೆಗೆ ಬಲವಾದ ಏಟು ಬಿದ್ದಿದ್ದರಿಂದಾಗಿ ಅವರು ಕೋಮಾ ಸ್ಥಿತಿಗೆ ತಲುಪಿದ್ದರು. ಅವರಿಗೆ ನಿರಂತರ ಚಿಕಿತ್ಸೆ ನೀಡಲಾಯಿತಾದರೂ ಮೆದುಳು ನಿಷ್ಕ್ರಿಯಗೊಂಡಿದ್ದರಿಂದ ಅವರು ಬದುಕುಳಿಯಲಿಲ್ಲ. 37ರ ಹರೆಯದ ಸಂಚಾರಿ ವಿಜಯ್ ಅವರುಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಅವರು ಅಂಗಾಂಗ ದಾನದ ಮೂಲಕ ಹಲವರ ಬಾಳಿಗೆ ಬೆಳಕಾಗಿದ್ದಾರೆ. ಸೋಮವಾರ ರಾತ್ರಿ 9.30 ಗಂಟೆಯಿಂದ ಮಧ್ಯರಾತ್ರಿ 12 ಗಂಟೆ ವರೆಗೂ ವೈದ್ಯರು ಅಂಗಾಂಗಗಳನ್ನು ಬೇರ್ಪಡಿಸುವ ಪ್ರಕ್ರಿಯೆ ನಡೆಸಿದ್ದಾರೆ.
ಯಕೃತ್, 2 ಕಿಡ್ನಿ, ಎರಡು ಕಣ್ಣು, ಶ್ವಾಸಕೋಶ ಹಾಗೂ ಹೃದಯ ಕವಾಟುಗಳನ್ನು ದಾನ ಮಾಡಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.