ವಿಜಯಪುರ: ಪ್ರತಿ ಹಳ್ಳಿಹಳ್ಳಿಗೂ ಜನೌಷಧ ಕೇಂದ್ರವನ್ನು ತೆಗೆದುಕೊಂಡು ಹೋಗಬೇಕು ಎಂಬ ನಿಟ್ಟಿನಲ್ಲಿ ಸಹಕಾರ ಇಲಾಖೆ ಮೂಲಕ ನಾವು ಚಿಂತನೆ ಮಾಡಿದ್ದೇವೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ವಿಜಯಪುರದಲ್ಲಿ ನಡೆದ 67ನೇ ಅಖಿಲ ಭಾರತ ಸಹಕಾರ ಸಪ್ತಾಹ 2020ರ ಸಮಾರಂಭದಲ್ಲಿ ಮಾತನಾಡಿದ ಸಚಿವ ಸೋಮಶೇಖರ್, ಪ್ರಧಾನ ಮಂತ್ರಿಗಳ ಜನೌಷಧಿ ಕೇಂದ್ರವನ್ನು ಸಹಕಾರ ಇಲಾಖೆಯ ಮಾರ್ಕೆಟಿಂಗ್ ಫೆಡರೇಷನ್ ಮೂಲಕ ತೆರೆಯುವ ಕಾರ್ಯಕ್ಕೆ ಕೇಂದ್ರ ಸರ್ಕಾರ ಚಾಲನೆ ಕೊಟ್ಟಿದ್ದು, ಇದಕ್ಕೆ ಕೇಂದ್ರ ಸಚಿವರಾದ ಸದಾನಂದ ಗೌಡರ ಪಾತ್ರ ಬಹಳ ದೊಡ್ಡದಿದೆ. ರಾಜ್ಯದಲ್ಲಿ ಇನ್ನೂ 600 ಜನೌಷಧ ಮಳಿಗೆಯನ್ನು ತೆರೆಯಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಆದರೆ, ಇವಿಷ್ಟೇ ಅಲ್ಲದೆ ಸಹಕಾರ ಇಲಾಖೆ ಮೂಲಕ ನಾವು ಪ್ರತಿ ಹಳ್ಳಿಯಲ್ಲೂ ಜನೌಷಧ ಮಳಿಗೆಯನ್ನು ಸ್ಥಾಪಿಸುವತ್ತ ಕಾರ್ಯಯೋಜನೆ ಹಾಕಿಕೊಳ್ಳುತ್ತೇವೆ ಎಂದು ಘೋಷಿಸಿದರು.