ಬೆಂಗಳೂರು: ಆಪೀಸರ್ಸ್ ವಾರ್ ವಿಚಾರದಿಂದಾಗಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ರಾಜಕೀಯ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ನಿಜ. ಆದರೆ ಅವರು ನೇರ ಹಾಗೂ ನಿಷ್ಟೂರ ನಡೆಯಿಂದಾಗಿ ಸಾಮಾಜಿಕ ವಲಯದಲ್ಲಿ ಹೀರೋಯಿನ್ ಎಂಬುದೂ ಅಷ್ಟೇ ಸತ್ಯ.
ವಕೀಲರ ಮಗಳು ಐಎಎಸ್ ಬರೆದು, ಅಧಿಕಾರಿಯಾಗಿ, ಸಕ್ಕರೆ ಜಿಲ್ಲೆ ಮಂಡ್ಯದ ಚಿತ್ರಣವನ್ನೇ ಬದಲಾಯಿಸಿದ ಪ್ರಬುದ್ಧ ವನಿತೆ ಎಂಬುದು ಇದೀಗ ಜನರಿಂದ ಜನರಿಗೆ ಹರಿದಾಡುತ್ತಿರುವ ಸಂಗತಿ. ಈ ಸಂಗತಿಗಳೇ ಇದೀಗ ಸಿನಿಮಾವಾಗುವ ಪ್ರಕ್ರಿಯೆಯಲ್ಲಿದೆ.
ಐಎಎಸ್ ಅಧಿಕಾರಿ ಜೀವನಗಾಥೆ ಆದರಿಸಿ ಸದ್ಯವೇ ಸಿನಿಮಾವೊಂದು ಸೆಟ್ಟೇರಲಿದೆ. ಅದಕ್ಕಾಗಿ ಪುರ್ವ ತಯಾರಿ ನಡೆಸಿರುವ ಮಂಡ್ಯದ ಸಾಹಿತಿ ಕೃಷ್ಣಸಂದ್ರ ಅವರು ಟೈಟಲ್ ರಿಜಿಸ್ಟರ್ ಮಾಡಿದ್ದಾರೆ. ಶ್ರೀ ನಾಲ್ವಡಿ ಕೃಷ್ಣರಾಜ ಫಿಲಂಸ್ ಬ್ಯಾನರ್ ಅಡಿಯಲ್ಲಿ ಫಿಲಂ ಚೇಂಬರ್‌ನಲ್ಲಿ ಅವರು ‘ಭಾರತ ಸಿಂಧೂರಿ’ ಎಂಬ ಹೆಸರಿನ ಸಿನಿಮಾಗಾಗಿ ಟೈಟಲ್ ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಅಂದ ಹಾಗೆ ಈ ಚಿತ್ರದಲ್ಲಿ ರೋಹಿಣಿ ಸಿಂಧೂರಿ ಪಾತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ಅಕ್ಷತಾ ಪಾಂಡವಪುರ ಅವರು ನಟಿಸಲಿದ್ದಾರಂತೆ.
ಆಡಳಿತಾತ್ಮಕ ವಿಚಾರದಲ್ಲಿ ರೋಹಿಣಿ ಸಿಂಧೂರಿಯವರು ರಾಜಕಾರಣಿಗಳ ಪಾಲಿಗೆ ವಿಲನ್ ರೀತಿ ಗೋಚರಿಸಿದರೆ ಸಾಮಾಜಿಕ ವಲಯದಲ್ಲಿ ಅವರು ಹೀರೋಯಿನ್ ಆಗಿ ಕಂಡುಬರುತ್ತಿದ್ದಾರೆ. ಹಾಗಾಗಿಯೇ ರೋಹಿಣಿ ನಡೆಯ ಸನ್ನಿವೇಶಗಳನ್ನೇ ಕಥೆಯಾಗಿಸಿ ‘ಭಾರತ ಸಿಂಧೂರಿ’ ಸಿನಿಮಾ ಮಾಡಲು ಕೃಷ್ಣ ಅವರು ಮುಂದಾಗಿದ್ದಾರಂತೆ.