ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ಬಳಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಚಿತ್ರ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಸ್ಪಷ್ಟಪಡಿಸಿದ್ದಾರೆ.
ತಾವು ಕುಮಾರಸ್ವಾಮಿ ಬಳಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ನಡೆಸಿದ ಪ್ರತಿಭಟನೆ ಕುರಿತಂತೆ ಪ್ರತಿಕ್ರಿಯಿಸಿದ ರಾಕಲೈನ್ ವೆಂಕಟೇಶ್, ನಾನು ಯಾರ ಮನಸ್ಸನ್ನು ನೋಯಿಸಿಲ್ಲ, ನನ್ನ ಹೇಳಿಕೆಯಿಂದ ಏನು ತಪ್ಪಾಗಿದೆ ಎಂದು ಹೇಳಿ. ಏನಾದರೂ ತಪ್ಪು ಮಾತನಾಡಿದ್ದರೆ ಖಂಡಿತ ಕ್ಷಮೆ ಯಾಚಿಸುವೆ ಎಂದವರು ಹೇಳಿದ್ದಾರೆ.
ತಮ್ಮ ನಿವಾಸ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರ ಬೆಂಬಲಿಗರು ನನ್ನ ಮನೆ ಮುಂದೆ ಪ್ರತಿಭಟನೆ ಮಾಡಲು ಬಂದಿದ್ದಾರೆ ಎಂದು ನನಗೆ ಗೊತ್ತಿಲ್ಲ, ಕುಮಾರಸ್ವಾಮಿ ಬಳಿ ಕ್ಷಮೆ ಕೇಳುವಂತಹ ತಪ್ಪನ್ನು ಮಾತುಗಳನ್ನು ನಾನು ಆಡಿಲ್ಲ ಎಂದು ಸ್ಪಷ್ಟಪಡಿಸಿದರು.
ಮಂಡ್ಯ ರಾಜಕೀಯ ವಿಷಯದಲ್ಲಿ ನಾನು ಏನೂ ಮಾತನಾಡಿಲ್ಲ. ನಾನು ಮಂಡ್ಯ ರಾಜಕಾರಣದಲ್ಲಷ್ಟೇ ಅಲ್ಲ, ರಾಜ್ಯ ರಾಜಕಾರಣದಲ್ಲೂ ಇಲ್ಲ, ಮುಂದೆ ಬರೋದೂ ಇಲ್ಲ, ಕುಮಾರಸ್ವಾಮಿ ಸಹಿತ ಎಲ್ಲ ಪಕ್ಷದವರೂ ನನ್ನನ್ನು ಕರೆದಿದ್ದಾರೆ, ಆದರೆ ನಾನೇ ಹೋಗಲಿಲ್ಲ, ರಾಜಕೀಯದಲ್ಲಿ ನನಗೆ ಆಸಕ್ತಿಯಿಲ್ಲ ಎಂದವರು ಹೇಳಿದರು.
ಅಂಬರೀಶ್ ಅವರು ನನಗೆ 20 ವರ್ಷಗಳ ಸ್ನೇಹಿತರು. ಹಾಗಾಗಿ ಕಳೆದ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಅಂಬರೀಷ್ ಅವರ ಕುಟುಂಬಕ್ಕೆ ಬೆನ್ನೆಲುಬಾಗಿ ನಿಂತುಕೊಂಡೆ. ಅಂಬರೀಷ್ ಅವರು ಇದ್ದಾಗಲೂ ನಾನು ಚುನಾವಣಾ ಪ್ರಚಾರ ಸಂದರ್ಭದಲ್ಲಿ ಹೋಗುತ್ತಿದ್ದೆ, ಅದರಲ್ಲೇನೂ ವಿಶೇಷವಿಲ್ಲ ಎಂದವರು ಸ್ಪಷ್ಟಪಡಿಸಿದರು.
ಕಳೆದ ಎರಡು ವರ್ಷಗಳಲ್ಲಿ ಮಂಡ್ಯ ರಾಜಕೀಯ ವಿಷಯದಲ್ಲಿ ವಾಕ್ಸಮರಗಳು ನಡೆಯುತ್ತಿದ್ದವು, ನಾನು ಇದುವರೆಗೆ ಮಾತನಾಡಲೇ ಇಲ್ಲ, ಅಂಬಿ ಸ್ಮಾರಕ ವಿಚಾರದಲ್ಲಿ ನಾನು ಮಾತನಾಡಿದೆನಷ್ಟೆ, ಆದರೆ ಯಾರನ್ನೂ ನೋಯಿಸುವ ಹೇಳಿಕೆಯನ್ನು ನಾನು ಆಡಿಲ್ಲ ಎಂದು ರಾಕ್ಲೈನ್ ಹೇಳಿದರು.
ಅಂಬರೀಶ್ ಅವರ ಸ್ಮಾರಕ, ಅವರ ಅಂತ್ಯಸಂಸ್ಕಾರ ವಿಚಾರದಲ್ಲಿ ಕುಮಾರಸ್ವಾಮಿಯವರು ಹೆಣದ ರಾಜಕೀಯವನ್ನು ಅವರು ಮಾಡಿದ್ದಾರೆ, ನಾನು ಚಿತ್ರರಂಗಕ್ಕೆ ಸಂಬಂಧಪಟ್ಟವನಾಗಿರುವುದರಿಂದ ನಾನು ಪ್ರತಿಕ್ರಿಯೆ ಕೊಟ್ಟೆ ಅಷ್ಟೆ ಎಂದು ರಾಕ್ ಲೈನ್ ಸ್ಪಷ್ಟಪಡಿಸಿದರು.