ನವದೆಹಲಿ: ಪರೀಕ್ಷೆಯ ನೆಪದಲ್ಲಿ ಹಿಂದೂ ಸಂಸ್ಕೃತಿ, ಸಂಪ್ರದಾಯಗಳಿಗೆ ಸಿದ್ದರಾಮಯ್ಯ ಸರ್ಕಾರ ಅಪಚಾರ ಎಸಗಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಇದೀಗ ಕೇಂದ್ರ ಸರ್ಕಾರವೂ ಅದೇ ರೀತಿಯ ನಡೆ ಅನುಸರಿಸಿದೆಯೇ ಎಂಬ ಚರ್ಚೆ ನಡೆದಿದೆ.
ಈ ವಿಚಾರದಲ್ಲಿ ಕ್ಷಿಪ್ರ ಕ್ರಮಕ್ಕೆ ಸೂಚಿಸಿರುವ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಸಚಿವ ವಿ. ಸೋಮಣ್ಣ ವಿವಾದಕ್ಕೆ ತೆರೆ ಎಳೆತುವ ಪ್ರಯತ್ನ ಮಾಡಿದ್ದಾರೆ
ಈ ತಿಂಗಳ 28, 29 ಮತ್ತು 30 ರೈಲ್ವೆ ಇಲಾಖೆಯಲ್ಲಿ ನೇಮಕಾತಿಗಾಗಿ ಪರೀಕ್ಷೆ ನಡೆಯುತ್ತಿದೆ. ಅಭ್ಯರ್ಥಿಗಳು ಜನಿವಾರ, ಮಾಂಗಲ್ಯ ಸೂತ್ರ ತೆಗೆದಿಟ್ಟು ಪರೀಕ್ಷೆ ಬರೆಯಬೇಕೆಂಬ ವಿಷಯವನ್ನು ಪರೀಕ್ಷಾ ನಿಯಮದಲ್ಲಿ ಉಲ್ಲೇಖಿಸಲಾಗಿದೆಯೆಂಬ ದೂರುಗಳು ಸಚಿವ ಸೋಮಣ್ಣ ಅವರಿಗೆ ಬಂದಿವೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸೋಮಣ್ಣ, ಸಂಸದರು, ಶಾಸಕರು ಇದನ್ನು ಸರಿಪಡಿಸುವಂತೆ ಮನವಿ ಮಾಡಿರುತ್ತಾರೆ. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮತ್ತು ವಿವಿಧ ಸಂಘಟನೆಗಳು ಈ ಬಗ್ಗೆ ಗಮನವನ್ನು ಸೆಳೆದಿರುತ್ತಾರೆ ಎಂದಿದ್ದಾರೆ.
ಈ ವಿಷಯದ ಬಗ್ಗೆ ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಮತ್ತು ರೈಲ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಗೊಂದಲ ನಿವಾರಿಸಲಾಗಿದೆ. ಜನಿವಾರ, ಮಾಂಗಲ್ಯ ಇತ್ಯಾದಿ ಸಂಸ್ಕೃತಿಯನ್ನು ಬಿಂಬಿಸುವ ಯಾವುದೇ ವಸ್ತುವನ್ನು ಧರಿಸಿ ಬಂದಲ್ಲಿ ಅಭ್ಯರ್ಥಿಗಳಿಗೆ ತೊಂದರೆ ನೀಡಬಾರದೆಂದು ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ ಎಂದು ಸೋಮಣ್ಣ ತಿಳಿಸಿದ್ದಾರೆ.
ಇತರ ಎಲ್ಲಾ ಪರೀಕ್ಷಾ ನಿಯಮವನ್ನು ಪಾಲಿಸಿ, ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲು ಸೂಚಿಸಲಾಗಿದೆ. ಪರೀಕ್ಷಾ ಅಭ್ಯರ್ಥಿಗಳು ಸಹ ನಿಯಮಾನುಸಾರ ಪರೀಕ್ಷೆ ಬರೆಯುವಂತೆ ಮನವಿ ಮಾಡುತ್ತೇನೆ. ಅಭ್ಯರ್ಥಿಗಳು ಗೊಂದಲಕ್ಕೀಡಾಗಬಾರದೆಂದು ಅವರು ಸಲಹೆ ನೀಡಿದ್ದಾರೆ.