ಬೆಂಗಳೂರು: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ಸಂಬಂಧ ಕಾನೂನು ಹಾಗೂ ಸಂವಿಧಾನ ತಜ್ಞರೊಂದಿಗೆ ಸಭೆ ನಡೆಸಿ ಸೂಕ್ತ ನ್ಯಾಯ ದೊರಕಿಸಿಕೊಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಪಂಚಮಸಾಲಿ ಸಮುದಾಯವನ್ನು ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆ ಮಾಡಲು ಶಿಫಾರಸ್ಸು ಮಾಡುವ ಬಗ್ಗೆ ಬಜೆಟ್ ಅಧಿವೇಶನದ ನಂತರ ಕಾನೂನು ಹಾಗೂ ಸಂವಿಧಾನ ತಜ್ಞರೊಂದಿಗೆ ಸಭೆ ಕರೆದು ಸಂವಿಧಾನಾತ್ಮಕ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಪಂಚಮಸಾಲಿ ಲಿಂಗಾಯತ ಗೌಡ ಮಲೆಗೌಡ ದೀಕ್ಷಾ ಲಿಂಗಾಯತ ಸಮುದಾಯವನ್ನು ರಾಜ್ಯ 2 ಎ ಅಥವಾ 2d ಪಟ್ಟಿಗೇ ಹಾಗೂ ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿಗೆ ಸೇರಿಸಲು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಯ ಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಪಂಚಮಸಾಲಿ ಶಾಸಕರ ನಿಯೋಗವು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದ ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ವರ್ಗಗಳ 2D ಪಟ್ಟಿಗೆ ಸೇರಿಸಿದಲ್ಲಿ ಅವರೂ ಮುಖ್ಯ ವಾಹಿನಿಗೆ ಬರಲು ಅನುಕೂಲ ವಾಗುತ್ತದೆ ಎಂದು ಸ್ವಾಮೀಜಿ ಅವರು ಮುಖ್ಯಮಂತ್ರಿಗೆ ಮನವರಿಕೆ ಮಾಡಿದರು.
ಮನವಿಯನ್ನು ಪರಿಶೀಲಿಸಿದ ಸಿಎಂ ಸಿದ್ದರಾಮಯ್ಯ, ಹಿಂದಿನ ಸರ್ಕಾರ ಮೀಸಲಾತಿ ವಿಚಾರದಲ್ಲಿ ತರಾತುರಿಯಲ್ಲಿ ನಿರ್ಧಾರ ಕೈಗೊಂಡು ಗೊಂದಲ ಸೃಷ್ಟಿಸಿದೆ. ಮೀಸಲಾತಿ ವಿಚಾರವಾಗಿ ಆತುರದ ನಿರ್ಧಾರ ಸಲ್ಲದು. ಸಂವಿಧಾನಾತ್ಮಕ ಹಾಗೂ ಕಾನೂನಿನ ಚೌಕಟ್ಟಿನಲ್ಲಿ ತೀರ್ಮಾನ ಮಾಡಬೇಕು. ಹಾಗಾಗಿ ಸಭೆ ಕರೆದು ಕೂಲಂಕುಷವಾಗಿ ಚರ್ಚಿಸಲಾಗುವುದು ಎಂದರು.
ಇದೇ ವೇಳೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನೂ ಭೇಟಿಯಾದ ನಿಯೋಗ ಪಂಚಮಸಾಲಿ ಸಮುದಾಯದ ಅಭಿವೃದ್ಧಿ ಸಂಬಂಧ ಕ್ರಮ ಕೈಗೊಳ್ಳಲು ಮನವಿ ಮಾಡಿತು. ಡಿಕೆಶಿ ಕೂಡಾ ಸಮುದಾಯದ ಮನವಿಗೆ ಸ್ಪಂದಿಸುವ ಭರವಸೆ ನೀಡಿದರು.
ನಾಯಕರ ಭೇಟಿ ನಂತರ, ಮಾಹಿತಿ ಹಂಚಿಕೊಂಡಿರುವ ಜಗದ್ಗುರು ಬಸವಜಯ ಮೃತ್ಯುಂಜಯ ಶ್ರೀ, ತಮ್ಮ ಸಮುದಾಯಕ್ಕೆ ಮೀಸಲಾತಿ ವಿಚಾರದಲ್ಲಿ ಸೂಕ್ತ ನ್ಯಾಯ ದೊರಕಿಸಿಕೊಡುವ ಬಗ್ಗೆ ಸಿಎಂ ಭರವಸೆ ನೀಡಿದ್ದಾರೆ. ನಾವು ಸರ್ಕಾರದ ಕ್ರಮದ ಬಗ್ಗೆ ವಿಶ್ವಾಸ ಹೊಂದಿದ್ದೇವೆ ಎಂದು ತಿಳಿಸಿದ್ದಾರೆ.
ಸಿಎಂ, ಡಿಸಿಎಂ ಅವರನ್ಬು ಭೇಟಿಯಾದ ನಿಯೋಗದಲ್ಲಿ ಮಹಿಳಾ ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಲ್ಕರ್, ಶಾಸಕರಾದ ವಿಜಯಾನಂದ ಕಾಶಪ್ಪನವರ್, ವಿನಯ್ ಕುಲಕರ್ಣಿ, ಮಾಜಿ ಸಚಿವ ಎ.ಬಿ.ಪಾಟೀಲ್ ಸೇರಿದಂತೆ ಸಮುದಾಯದ 15 ಮಂದಿ ಶಾಸಕರು ಹಾಗೂ ಪಂಚಮಸಾಲಿ ಲಿಂಗಾಯತ ಗೌಡ ಮಲೆಗೌಡ ದೀಕ್ಷಾ ಲಿಂಗಾಯತ ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು.