ಬೆಂಗಳೂರು: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಡಗು ಸೋಲಿನ ಸುಳಿಗೆ ಸಿಲುಕಲಿರುವುದನ್ನು ಅರಿತ ಬಿಜೆಪಿ ಸರ್ಕಾರ ಈಗ ರಾಜ್ಯದ ಬಹುತೇಕ ಸಮುದಾಯಗಳಿಗೆ ಮೀಸಲಾತಿ ಹೆಸರಲ್ಲಿ ದ್ರೋಹ, ವಂಚನೆ, ಮೋಸ ಮಾಡುವ ರಣನೀತಿ ರೂಪಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
75 ವರ್ಷಗಳ ಸ್ವತಂತ್ರ ಭಾರತದ ಇತಿಹಾಸದಲ್ಲಿ ಎಂದಿಗೂ ರಾಜ್ಯ ಸರ್ಕಾರ 90 ದಿನಗಳ ಅವಧಿಯಲ್ಲಿ ಮಿಸಲಾತಿ ವರ್ಗೀಕರಣವನ್ನು ಮೂರು ಬಾರಿ ಬದಲಾವಣೆ ಮಾಡಿರಲಿಲ್ಲ. ಆ ಮೂಲಕ ಬಿಜೆಪಿ ಸರ್ಕಾರ ಎಲ್ಲರನ್ನು ವಂಚಿಸಿ, ಎಲ್ಲರನ್ನು ಒಡೆದು, ಎಲ್ಲ ಸಮುದಾಯಗಳನ್ನು ಪರಸ್ಪರ ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿದೆ ಎಂದಿರುವ ಪ್ರತಿಪಕ್ಷ ಕಾಂಗ್ರೆಸ್, ಈ ರೀತಿ ಮಾಡಿದಾಗ ಮೀಸಲಾತಿ ಬೇಡಿಕೆ ವಿಚಾರವಾಗಿ ಕೂಗು ಹೆಚ್ಚಾಗಿ ಜನರು ಈ ಸರ್ಕಾರದ ಲೂಟಿ, ಹಗರಣಗಳನ್ನು ಮರೆಸುವಂತೆ ಮಾಡುತ್ತದೆ. ಆ ಮೂಲಕ ಸರ್ಕಾರ 40% ಕಮಿಷನ್ ಸರ್ಕಾರ ಎಂಬ ಕಳಂಕದಿಂದ ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಮಾಡುತ್ತಿದೆ. ಈ ಎಲ್ಲದರಿಂದಾಗಿ BJP ಪಕ್ಷ ಈಗ ‘BETRAYAL JANATA PARTY’ ಅಂದರೆ ದ್ರೋಹ ಬಗೆಯುವ ಜನತಾ ಪಕ್ಷವಾಗಿದೆ ಎಂದು ಮಾಧ್ಯಮ ಹೇಳಿಕೆ ಮೂಲಕ ಅಸಮಾಧಾನ ಹೊರಹಾಕಿದೆ.






















































