ಬೆಂಗಳೂರು: ಮೀಸಲಾತಿ ವಿಚಾರದಲ್ಲಿ ಬೊಮ್ಮಾಯಿ ಸರ್ಕಾರ ಮತ್ತು ಬಿಜೆಪಿ ಲಿಂಗಾಯತ, ಒಕ್ಕಲಿಗ ಹಾಗೂ ಪರಿಶಿಷ್ಟ ಸಮುದಾಯದವರಿಗೆ ಮೋಸ ಮಾಡಿದೆ ಡಂದು ಕಾಂಗ್ರೆಸ್ ಆರೋಪಿಸಿದೆ.
ಈ ಕುರಿತಂತೆ ಜಂಟಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಎಐಸಿಸಿ ನಾಯಕ ರಣದೀಪ್ ಸಿಂಗ್ ಸರ್ಜೇವಾಲ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮೀಸಲಾತಿ ವಿಚಾರದಲ್ಲಿ ಬಿಜೆಪಿಯ ಮಹಾ ಮೋಸ ಮತ್ತೊಮ್ಮೆ ಬಯಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಬೊಮ್ಮಾಯಿ ಸರ್ಕಾರ ತನ್ನ ಮೀಸಲಾತಿ ಹೆಚ್ಚಳ ಆದೇಶ ಸಮರ್ಥಿಸಿಕೊಳ್ಳಲು ಸುಪ್ರೀಂ ಕೋರ್ಟ್ ನಲ್ಲಿ ಅಫಿಡವಿಟ್ ಸಲ್ಲಿಸಲು ವಿಫಲವಾಗಿದೆ. ಆಮೂಲಕ ಮೀಸಲಾತಿ ವಿಚಾರದಲ್ಲಿ ಲಿಂಗಾಯತ, ಒಕ್ಕಲಿಗ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ ಸಮುದಾಯಗಳಿಗೆ ದ್ರೋಹ ಬಗೆದಿದೆ, ಅಪಮಾನ ಮಾಡಿದೆ ಎಂದಿರುವ ಈ ನಾಯಕರು, ಬೊಮ್ಮಾಯಿ ಸರ್ಕಾರ 2002 ರಲ್ಲಿ ಜಾರಿಗೆ ತಂದಿದ್ದ ಮೀಸಲಾತಿಯನ್ನು ಮರು ಜಾರಿ ಮಾಡುವುದಾಗಿ ಕೋರ್ಟ್ ನಲ್ಲಿ ತಿಳಿಸಿದೆ. ಆಮೂಲಕ ಒಕ್ಕಲಿಗರು 3A ಹಾಗೂ ಲಿಂಗಾಯತರು 3B ವರ್ಗೀಕರಣದಲ್ಲಿ ಮುಂದುವರಿಯಲಿದ್ದಾರೆ ಎಂದರು.
ಬೊಮ್ಮಾಯಿ ಸರ್ಕಾರ ಆದೇಶದಂತೆ ಹೆಚ್ಚುವರಿ 2% ಮೀಸಲಾತಿ ಸಿಗುವುದಿಲ್ಲ. ಬೊಮ್ಮಾಯಿ ಸರ್ಕಾರ ಏ.25, 2023ರಂದು ಸುಪ್ರೀಂ ಕೋರ್ಟ್ ನಲ್ಲಿ ಸಾಲಿಸಿಟರ್ ಜನರಲ್ ಮೂಲಕ, ಮಾರ್ಚ್ 27, 2023ರಂದು ತಾನು ಹೊರಡಿಸಿದ್ದ ಮೀಸಲಾತಿ ಹೆಚ್ಚಳ ಆದೇಶಕ್ಕೆ ತಾನೇ ತಡೆ ಹಿಡಿದಿದ್ದು, ಕ್ಷಮಿಸಲಾರದ ಪಾಪ ಎಸಗಿದೆ. ಆ ಮೂಲಕ ಕಾಂಗ್ರೆಸ್ ಪಕ್ಷ ಹೇಳಿದ್ದ ಮಾತು ನಿಜವಾಗಿದೆ. ಬೊಮ್ಮಾಯಿ ಹಾಗೂ ಮೋದಿ ನೇತೃತ್ವದ ಬಿಜೆಪಿ ಡಬಲ್ ಇಂಜಿನ್ ಸರ್ಕಾರಗಳು ಈ ಸಮುದಾಯಗಳಿಗೆ ಡಬಲ್ ದ್ರೋಹ ಬಗೆದಿವೆ ಎಂದು ಕಾಂಗ್ರೆಸ್ ನಾಯಕರು ಆಕ್ರೋಶ ಹೊರಹಾಕಿದ್ದಾರೆ.
ದ್ರೋಹ ಬಗೆವ ಬಿಜೆಪಿ ಸರ್ಕಾರದ ಮೂಲ ಉದ್ದೇಶ, ಚುನಾವಣೆ ಸಮಯದಲ್ಲಿ ಮೀಸಲಾತಿ ಹೆಚ್ಚಳ ಹೆಸರಿನಲ್ಲಿ ಈ ಸಮುದಾಯಗಳಿಗೆ ಲಾಲಿಪಾಪ್ ಕೊಟ್ಟು ಯಾಮಾರಿಸುವ ಪ್ರಯತ್ನ ನಡೆದಿದೆ. ಅಂತಿಮವಾಗಿ ಈ ಮೀಸಲಾತಿ ಹೆಚ್ಚಳ ವಿಚಾರ ಕಾನೂನು ಕಟಕಟೆಯಲ್ಲಿ ನಿಂತು ಯಾರಿಗೂ ಮೀಸಲಾತಿ ಸಿಗಬಾರದು, ಮೀಸಲಾತಿ ಹೆಸರಿನಲ್ಲಿ ಮತ ಬ್ಯಾಂಕ್ ರಾಜಕಾರಣ ಮಾಡುವ ಷಡ್ಯಂತ್ರ ರೂಪಿಸಿದೆ ಎಂದು ಆರೋಪಿಸಿರುವ ಈ ಮುಖಂಡರು, ಈ ಷಡ್ಯಂತ್ರ ಸುಪ್ರೀಂ ಕೋರ್ಟ್ ನಲ್ಲಿ ಬಟಾಬಯಲಾಗಿದೆ.ಲ ಎಂದಿದ್ದಾರೆ.
ಪ್ರಸ್ತುತ ವೆಳವಣಿಗೆಯಿಂದ ಆಗಬಹುದಾದ ಪರಿಣಾಮಗಳೇನು ಎಂಬ ಬಗ್ಗೆಯೂ ಈ ನಾಯಕರು ಮಾಧ್ಯಮ ಹೇಳಿಕೆಯಲ್ಲಿ ಬೊಟ್ಟು ಮಾಡಿದ್ದಾರೆ.
ಲಿಂಗಾಯತರ ಮೀಸಲಾತಿ ವರ್ಗೀಕರಣ 2Dಯಿಂದ 3Bಗೆ ಮರಳಿದೆ.
ಲಿಂಗಾಯತರಿಗೆ ನೀಡಲಾಗಿದ್ದ 2% ಹೆಚ್ಚುವರಿ ಮೀಸಲಾತಿ ಹಿಂಪಡೆದಂತಾಗಿದೆ.
ಒಕ್ಕಲಿಗರ ಮೀಸಲಾತಿ ವರ್ಗೀಕರಣ 2Cಯಿಂದ 3Aಗೆ ಮರಳಿದೆ.
ಒಕ್ಕಲಿಗರಿಗೆ ನೀಡಲಾಗಿದ್ದ 2% ಹೆಚ್ಚುವರಿ ಮೀಸಲಾತಿ ಹಿಂಪಡೆದಂತಾಗಿದೆ.
ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯಗಳ ಮೀಸಲಾತಿ ಹೆಚ್ಚಳವನ್ನು ಕೇಂದ್ರ ಸರ್ಕಾರ ಮಾರ್ಚ್ 14, 2023ರಂದು ಸಂಸತ್ತಿನಲ್ಲಿ ನಿರಾಕರಿಸಿದೆ.
ಒಟ್ಟಾರೆ ಇದೆಲ್ಲದರ ಫಲ ಯಾರಿಗೂ ಯಾವುದೇ ಮೀಸಲಾತಿ ಸಿಗದೆ ಎಲ್ಲರಿಗೂ ವಂಚನೆ ಮಾಡಲಾಗಿದೆ.
ಬೊಮ್ಮಾಯಿ ಸರ್ಕಾರ 2002 ಅಕ್ಟೋಬರ್ 30ರಂದು ಜಾರಿ ಮಾಡಲಾಗಿದ್ದ ಮೀಸಲಾತಿಯನ್ನು ಮರುಜಾರಿಗೆ ತಂದಿದೆ.
ಇದೇ ವೇಳೆ, ಮೀಸಲಾತಿ ವಿಚಾರದಲ್ಲಿ ಪ್ರಧಾನಿ ಮೋದಿ ಹಾಗೂ ಸಿಎಂ ಬೊಮ್ಮಾಯಿಯವರ ಮುಂದೆ ಹಲವು ಪ್ರಶ್ನೆಗಳನ್ನು ಇಟ್ಟಿದೆ. ಒಕ್ಕಲಿಗರು, ಲಿಂಗಾಯತರು, ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯಗಳಿಗೆ ಸುಳ್ಳಿನ ಮೀಸಲಾತಿ ಘೋಷಿಸಿ ಮೋಸ ಮಾಡಿದ್ದು ಯಾಕೆ? ಎಂದು ಪ್ರಶ್ನಿಸಿರುವ ಕಾಂಗ್ರೆಸ್ ನಾಯಕರು, ಸರ್ಕಾರ ತನ್ನ ಮೀಸಲಾತಿ ಹೆಚ್ಚಳ ಆದೇಶವನ್ನು ಸುಪ್ರೀಂ ಕೋರ್ಟ್ ನಲ್ಲಿ ಸಮರ್ಥಿಸಿಕೊಳ್ಳುತ್ತಿಲ್ಲ ಯಾಕೆ? ಮೀಸಲಾತಿ ಪ್ರಕರಣದಲ್ಲಿ ಮೋದಿ ಹಾಗೂ ಬೊಮ್ಮಾಯಿ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಅಫಿಡವಿಟ್ ಸಲ್ಲಿಸಿಲ್ಲ ಯಾಕೆ? ಮಾರ್ಚ್ 14, 2023ರಂದು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮೀಸಲಾತಿ ಹೆಚ್ಚಳವನ್ನು ನಿರಾಕರಿಸಿದ್ದು ಯಾಕೆ? ಎಂದು ಪ್ರಶ್ನಿಸಿದೆ.
ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮೀಸಲಾತಿ ಹೆಚ್ಚಳ ಕಾನೂನನ್ನು ಸಂವಿಧಾನದ 9ನೇ ಶೆಡ್ಯೂಲ್ ನಲ್ಲಿ ಸೇರಿಸಲಿಲ್ಲ ಏಕೆ? ಪರಿಶಿಷ್ಟ ಜಾತಿ ಹಾಗೂ ಪಂಗಡಗಳು, ಲಿಂಗಾಯತರು, ಒಕ್ಕಲಿಗರು, ಹಿಂದುಳಿದ ವರ್ಗಗಳು ಹಾಗೂ ಇತರ ಸಮುದಾಯಗಳು ಮೀಸಲಾತಿ ಹೆಚ್ಚಳ ಬೇಡಿಕೆ ಇಟ್ಟಿದ್ದು, ಇವರ ಆಶೋತ್ತರ ಈಡೇರಿಸಲು 50% ಇರುವ ಮೀಸಲಾತಿ ಮಿತಿ ವಿಸ್ತರಣೆ ಮಾಡಲು ನಿರಾಕರಿಸುತ್ತಿರುವುದು ಏಕೆ? ಚುನಾವಣೆ ಸಮಯದಲ್ಲಿ ಸಮಾಜ ಒಡೆದು ರಾಜಕೀಯ ಲಾಭಕ್ಕಾಗಿ ಅಲ್ಪಸಂಖ್ಯಾತರನ್ನು ಗುರಿ ಮಾಡುತ್ತಿರುವುದೇಕೆ? ಮೀಸಲಾತಿ ಹೆಚ್ಚಳ ನಿರ್ಧಾರವನ್ನು ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಹೇಳಿಕೆ ಮೂಲಕ ತಡೆ ನೀಡಿರುವುದೇಕೆ? ಎಂದು ಸರಣಿ ಪ್ರಶ್ನೆಗಳನ್ನು ಮುಂದಿಟ್ಟಿರುವ ಕೈ ಮುಖಂಡರು, ಪರಿಶಿಷ್ಟ ಜಾತಿ ಹಾಗೂ ಪಂಗಡಗಳು, ಲಿಂಗಾಯತರು, ಒಕ್ಕಲಿಗರು, ಹಿಂದುಳಿದ ವರ್ಗಗಳಿಗೆ ಮೀಸಲಾತಿ ವಿಚಾರದಲ್ಲಿ ಆಗಿರುವ ಮೋಸಕ್ಕೆ ಪ್ರಧಾನಿ ಮೋದಿ ಅವರು ಸಾರ್ವಜನಿಕವಾಗಿ ಕ್ಷಮೆ ಕೇಳುವರೆ? ಎಂದಿದೆ. ಇಷ್ಟೇಲ್ಲಾ ದ್ರೋಹ ಬಗೆದಿರುವ ಬಿಜೆಪಿಗೆ ರಾಜ್ಯದ ಮತದಾರರು 40ಕ್ಕಿಂತ ಹೆಚ್ಚಿನ ಸೀಟು ನೀಡುವುದಿಲ್ಲ ಎಂದು ಈ ಮುಖಂಡರು ವಿಶ್ಲೇಷಣೆ ಮಾಡಿದ್ದಾರೆ.

























































