ಬೆಂಗಳೂರು: ರಾಜ್ಯ ಸರ್ಕಾರದ ಅದರಲ್ಲೂ ಆರೋಗ್ಯ ಇಲಾಖೆಯ ನಿರ್ಲಕ್ಷವು ನಕಲಿ ವ್ಯೂಹದ ಖದೀಮರ ಕೃತ್ಯಗಳಿಗೆ ಹಾದಿ ಮಾಡಿಕೊಟ್ಟಿದೆ. ಕೊರೋನಾ ಸಂಕಟ ಕಾಲದಲ್ಲಿ ಸೋಂಕಿತರಿಗೆ ರಾಮ ಬಾಣದಂತಿರುವ ರೆಮ್‌ಡಿಸಿವಿರ್ ಕಾಳಸಂತೆಯಲ್ಲಿ ಮಾರಾಟವಗುವುದಷ್ಟೇ ಅಲ್ಲ, ನಕಲಿ ಔಷಧಿಯೂ ಎಗ್ಗಿಲ್ಲದೆ ಸಾಗಿದೆ. ಈ ಸಂಬಂಧ ಬೆಂಗಳೂರಿನ ಜೆ.ಸಿ.ನಗರ ಉಪವಿಭಾಗದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಈ ಆರೋಪಿಗಳೆಲ್ಲರೂ ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವವರು ಎಂಬುದೇ ವಿಪರ್ಯಾಸದ ಸಂಗತಿ.
ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಅಸಹಾಯಕತೆಯನ್ನು ದಾಳವಾಗಿಸಿ ಈ ನಕಲಿ ಔಷಧಿ ಜಾಲ ಕಾರ್ಯನಿರ್ವಹಿಸುತ್ತಿವೆ. ಈ ಬಗ್ಗೆ ಮಾಹಿತಿ ಕಲೆಹಾಕಿದ ಎಸಿಪಿ ರೀನಾ ಸುವರ್ಣ ಹಾಗೂ ಸಂಜಯನಗರ ಠಾಣೆಯ ಇನ್‌ಸ್ಪೆಕ್ಟರ್ ಕಾತ್ಯಾಯಿನಿ ನೇತೃತ್ವದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆಗಿಳಿದು ಖದೀಮರನ್ನು ಸೆರೆಹಿಡಿದಿದ್ದಾರೆ.
ರೆಮ್‌ಡಿಸಿವಿರ್ ಔಷಧಿಯನ್ನು ನಕಲಿಯಾಗಿ ಸೃಷ್ಟಿಸುತ್ತಿದ್ದ ಆರೋಪದಲ್ಲಿ ಮೈಸೂರು ರಸ್ತೆ ನಿವಾಸಿ ರವಿಕುಮಾರ್, ನಾಗವಾರ ಮುಖ್ಯ ರಸ್ತೆ ಬಳಿಯ ನಿವಾಸಿ ಮುನಿರಾಜು, ಕಾಮಾಕ್ಷಿ ಪಾಳ್ಯದ ಕೃಷ್ಣ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಆರೋಪಿಗಳನ್ನು ವಿಚಾರಣೆಗೆ ಗುರಿಪಡಿಸಿದಾಗ ಸಿಕ್ಕಿದ ಸುಳಿವನ್ಬಾಧರಿಸಿ ಎಸಿಪಿ ರೀನಾ ಹಾಗೂ ಕಾತ್ಯಾಯಿನಿ ಈ ಕಳ್ಳದಂಧೆಯ ವಿರಾಟ್ ಸ್ವರೂಪವನ್ನೇ ಅನಾವರಣ ಮಾಡಿದರು.ಈ ಖದೀಮರ ಜೊತೆ ಕಾಳಸಂತೆಯಲ್ಲಿ ಔಷಧಿ ಮಾರಾಟ ಮಾಡುತ್ತಿದ್ದ ಮತ್ತೊಂದು ಪ್ರಕರಣದಲ್ಲಿ ಪ್ರತಿಷ್ಟಿತ ಆಸ್ಪತ್ರೆಯ ವೈದ್ಯರೂ ಸೇರಿಕೊಂಡಿರುವ ಸಂಗತಿಯನ್ನೂ ಪೊಲೀಸರು ಬಯಲಿಗೆಳೆದರು. ಈ ಸಂಬಂಧ ಹೊಸೂರು ರಸ್ತೆಯ ಕೂಡ್ಲು ಬಳಿಯ ಮಾತೃ ಆಸ್ಪತ್ರೆಯ ವೈದ್ಯಾಧಿಕಾರಿ ಸಾಗರ್ ಎಂಬವರನ್ನೂ ಬಂಧಿಸಿದರು.
ಆಸ್ಪತ್ರೆಗಳಲ್ಲಿ ಬಳಕೆಯಾದ ರೆಮ್‌ಡಿಸಿವಿರ್ ಔಷಧಿಯ ಬಾಟಲಿಗಳನ್ನು ಸಂಗ್ರಹಿಸಿ ಅದಕ್ಕೆ ಎನ್‌ಎಸ್ ದ್ರಾವಣವನ್ನು ತುಂಬಿಸಿ ಅಸಲಿ ಔಷಧಿಯಂತೆ ಬಿಂಬಿಸುತ್ತಿದ್ದರು. ಈ ಬಾಟಲಿಗಳ ಸಂಗ್ರಹಕ್ಕಾಗಿ ಹೌಸ್ ಕೀಪಿಂಗ್ ಕೆಲಸದವರನ್ನು ಈ ಖದೀಮರು ಬಳಸುತ್ತಿದ್ದರು. ಈ ನಕಲಿ ಔಷಧಿಯನ್ನು ಸಾವಿರಾರು ರೂಪಾಯಿ ದರಕ್ಕೆ ಮಾರುತ್ತಿದ್ದರು. ರೆಮಿಡಿಸಿವೀರ್ ಔಷಧದ ಕೊರೆತೆಯೇ ಈ ಖದೀಮರಿಗೆ ವರದಾನವಾಗುತ್ತಿತ್ತು. ಅಸಲಿ ರೆಮಿಡಿಸಿವೀರ್ ಔಷಧಿ 3 ಸಾವಿರ ರೂಪಾಯಿಗೆ ಸಿಗುತ್ತದೆಯಾದರೂ ಈ ಖದೀಮರು ನಕಲಿ ಔಷಧಿಯನ್ನೇ 30 ಸಾವಿರದಿಂದ 40 ಸಾವಿರ ರೂಪಾಯಿಗಳಿಗೆ ಮಾರಾಟ ಮಾಡಲು ವ್ಯವಹಾರ ಕುದುರಿಸುತ್ತಿದ್ದರೆನ್ನಲಾಗಿದೆ.
ಕೆಲವು ದಿನಗಳ ಹಿಂದಷ್ಟೇ ಜೆ.ಸಿ.ನಗರ ಠಾಣಾ ಪೊಲೀಸರು ಇದೇ ರೀತಿ ಕಾರ್ಯಾಚರಣೆ ನಡೆಸಿ ಔಷಧಿ ಮಾಫಿಯಾವನ್ನು ಬೇಧಿಸಿದ್ದರು. ಇದೀಗ ಅದೇ ಉಪವಿಭಾಗದ ಸಂಜಯನಗರ ಠಾಣಾ ಪೊಲೀಸರೂ ಮಹತ್ವದ ಕಾರ್ಯಾಚರಣೆ ನಡೆಸಿ ಖದೀಮರನ್ನು ಜೈಲಿಗಟ್ಟಿದ್ದಾರೆ.