ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC)ಯಲ್ಲಿ ಉದ್ಯೋಗ ಕೊಡಿಸುವುದಾಗಿ ಆಮಿಷ ಒಡ್ಡಿ, ಸಂಸ್ಥೆಯಲ್ಲಿ ಉನ್ನತ ಅಧಿಕಾರಿಯೆಂದು ಸುಳ್ಳು ಹೇಳಿ, ನಿಗಮದ ನಕಲಿ ಲೆಟರ್ ಹೆಡ್ ತೋರಿಸುವ ಮೂಲಕ ನಂಬಿಸಿ, ಉದ್ಯೋಗಾಕಾಂಕ್ಷಿಗಳಿಗೆ ವಂಚನೆ ಮಾಡಿರುವ ಬಗ್ಗೆ ಪೋಲೀಸ್ ಪ್ರಕರಣ ದಾಖಲಾಗಿರುವ ಬೆಳವಣಿಗೆಯನ್ನು ನಿಗಮವು ಗಂಭೀರವಾಗಿ ಪರಿಗಣಿಸಿದೆ. ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ಎಚ್ಚರಿಕೆಯ ಸಂದೇಶವನ್ನೂ ನಿಗಮ ನೀಡಿದೆ.
ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ KSRTC ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ, ನಿಗಮದಲ್ಲಿ ಎಲ್ಲಾ ನೇರ ನೇಮಕಾತಿಗಳನ್ನು ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಸ್ವೀಕರಿಸಿ, ಮೆರಿಟ್ ಹಾಗೂ ಮೀಸಲಾತಿ ಆಧಾರದ ಮೇಲೆ ಗಣಕೀಕೃತ ವ್ಯವಸ್ಥೆಯ ಮೂಲಕ ಮಾನವ ಹಸ್ತಕ್ಷೇಪಕ್ಕೆ ಅವಕಾಶ ನೀಡದೆ, ಪಾರದರ್ಶಕವಾಗಿ ನೇಮಕಾತಿ ಪ್ರಕ್ರಿಯೆ ಕೈಗೊಳ್ಳುವ ವ್ಯವಸ್ಥೆ ಚಾಲ್ತಿಯಲ್ಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ನಿಗಮದಲ್ಲಿ ನೇಮಕಾತಿಗೆ ಸಂಬಂಧಪಟ್ಟಂತೆ ನೇರವಾಗಿ ಅರ್ಜಿ ಪಡೆದು/ಶಿಫಾರಸ್ಸಿನ ಮೇಲೆ ನೇಮಕಾತಿ ಮಾಡಿಕೊಳ್ಳಲು ಯಾವುದೇ ಅವಕಾಶವಿಲ್ಲ. ಸಾರ್ವಜನಿಕ ಪ್ರಕಟಣೆಯ ಮೂಲಕ ಜಾಹೀರಾತು ಹೊರಡಿಸಿಯೇ ನೇಮಕಾತಿ ಕೈಗೊಳ್ಳುವುದರಿಂದ, ಉದ್ಯೋಗಾಕಾಂಕ್ಷಿಗಳು ಇಂತಹ ಆಮಿಷ/ಒತ್ತಡಗಳಿಗೆ ಒಳಗಾಗಬಾರದು. ಈ ಸಂಬಂಧ ಹಣ ಕೇಳುವವರ ಬಗ್ಗೆ ತಮ್ಮ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಸಲಹೆ ನೀಡಿದ್ದಾರೆ.
KSRTCಯಲ್ಲಿನ ಯಾವುದೇ ನೇಮಕಾತಿಗೆ ಸಂಬಂಧಪಟ್ಟ ಎಲ್ಲಾ ಮಾಹಿತಿಗಳನ್ನು ksrtcjobs.gov.in ನಲ್ಲಿ ಪ್ರಕಟಿಸಲಾಗುತ್ತದೆ ಎಂದವರು ತಿಳಿಸಿದ್ದಾರೆ.























































