ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಚಾಲಕ-ಕಂ-ನಿರ್ವಾಹಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಚಾಲನಾ ವೃತ್ತಿ ಪರೀಕ್ಷೆಗೆ ಅರ್ಹರಾದವರಿಗೆ ಈ ತಿಂಗಳ 17ರಿಂದ ಚಾಲನಾ ವೃತ್ತಿ ಪರೀಕ್ಷೆ ಪ್ರಾರಂಭವಾಗಲಿದೆ.
ಚಾಲನಾ ವೃತ್ತಿ ಪರೀಕ್ಷೆಗೆ ಅರ್ಹರಾಗಿ ಹಾಸನ ತರಬೇತಿ ಕೇಂದ್ರದಲ್ಲಿ ಚಾಲನಾ ವೃತ್ತಿ ಪರೀಕ್ಷೆ ಪಡೆಯಲು ಇಚ್ಚಿಸಿರುವ ಅಭ್ಯರ್ಥಿಗಳಿಗೆ 16-12-2024 ರಿಂದ ಚಾಲನಾ ವೃತ್ತಿ ಪರೀಕ್ಷೆಯನ್ನು ಪ್ರಾರಂಭಿಸಲಾಗುತ್ತಿದೆ ಎಂದು ನಿಗಮದ ಪ್ರಕಟಣೆ ತಿಳಿಸಿದೆ.
ಅಭ್ಯರ್ಥಿಗಳು 10-12-2024ರಂದು ಮಧ್ಯಾಹ್ನ 1 ಗಂಟೆಯಿಂದ ನಿಗಮದ ಅಧಿಕೃತ ವೆಬ್-ಸೈಟ್ ಆದ ksrtcjobs.karnataka.gov.in ರಲ್ಲಿ ಕರೆಪತ್ರವನ್ನು ಡೌನ್-ಲೋಡ್ ಮಾಡಿಕೊಂಡು ಕರೆಪತ್ರದಲ್ಲಿ ತಿಳಿಸಿರುವ ಅಗತ್ಯ ದಾಖಲಾತಿಗಳೊಂದಿಗೆ ನಿಗದಿತ ದಿನಾಂಕ ಹಾಗೂ ಸಮಯಕ್ಕೆ ಹಾಜರಾಗಬೇಕೆಂದು ನಿಗಮವು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ಇದೇ ವೇಳೆ, ನೇಮಕಾತಿಯನ್ನು ಅಭ್ಯರ್ಥಿಗಳು ಗಣಕೀಕೃತ ಚಾಲನಾ ಪಥದಲ್ಲಿ ಗಳಿಸಿದ ಅಂಕಗಳ ಮೆರಿಟ್ ಹಾಗೂ ಅಧಿಸೂಚನೆ ಸಂದರ್ಭದಲ್ಲಿ ಚಾಲ್ತಿಯಲ್ಲಿದ್ದ ಮೀಸಲಾತಿ ನಿಯಮಗಳಿಗೆ ಅನುಗುಣವಾಗಿ ಪಾರದರ್ಶಕವಾಗಿ ನಡೆಯುವುದರಿಂದ ಮಾನವ ಹಸ್ತಕ್ಷೇಪ ಇರುವುದಿಲ್ಲ. ಆದುದರಿಂದ ಅಭ್ಯರ್ಥಿಗಳು ಯಾವುದೇ ಶಿಫಾರಸ್ಸು/ ಮಧ್ಯವರ್ತಿಗಳ ಅಮಿಷಗಳಿಗೆ ಒಳಗಾಗಬಾರದೆಂದು ನಿಗಮ ಎಚ್ಚರಿಕೆಯನ್ನೂ ನೀಡಿದೆ.