ಸಿ.ಡಿ.ಚಕ್ರದ ಸುಳಿಯಲ್ಲಿ ಗಿರಕಿ ಹೊಡೆಯುತ್ತಿದೆ ಸಚಿವ ರಮೇಶ್ ಜಾರಕಿಹೊಳಿ ಭವಿಷ್ಯ.. ಬಿಜೆಪಿ ಹೈಕಮಾಂಡ್ ಕೂಡಾ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದೆ. ಮಿನಿಮಹಾಸಮರ ಸಂದರ್ಭದಲ್ಲಿ ಈ ಮುಜುಗರದಿಂದ ಪಾರಾಗುವುದೇ ಕಮಲ ನಾಯಕರಿಗೆ ಎದುರಾಗಿರುವ ಸವಾಲು..
ದೆಹಲಿ : ಬಿಜೆಪಿ ಪಾಳಯದಲ್ಲಿ ಇದೀಗ ಮುಜುಗರದ ಸನ್ನಿವೇಶ. ಒಂದೆಡೆ ವಿವಾದಿತ ಸಿ.ಡಿ.ಯ ಚಕ್ರದ ಸುಳಿಯಲ್ಲಿ ಸಚಿವ ರಮೇಶ್ ಜಾರಕಿಹೊಳಿ ಸಿಲುಕಿದ್ದರೆ, ಇನ್ನೊಂದೆಡೆ ‘ಬೇಟಿ ಬಚಾವೋ ಬೇಟಿ ಪಡಾವೋ’ ಎಂಬ ಮೋದಿ ಮಂತ್ರವನ್ನು ಪಠಿಸುವ ಕಮಲ ನಾಯಕರಿಗೆ ಮುಜುಗರದ ಪರಿಸ್ಥಿತಿ.
ಈ ವಿವಾದಿತ ಪ್ರಸಂಗದ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆಯೇ ಸಂಘ ಪರಿವಾರದ ಮುಖಂಡರು ಹಾಗೂ ಬಿಜೆಪಿ ರಾಷ್ಟ್ರೀಯ ವರಿಷ್ಠರು ರಾಜ್ಯದ ನಾಯಕರಿಂದ ಮಾಹಿತಿ ಪಡೆದಿದ್ದು ಅಡಳಿತಾರೂಢ ಬಿಜೆಪಿಯಲ್ಲಿನ ವಿದ್ಯಮಾನ ರೋಚಕತೆಯ ಘಟ್ಟ ತಲುಪಿದೆ.
ಸದ್ಯದ ಪರಿಸ್ಥಿತಿಯಲ್ಲಿ ಮುಜುಗರದಿಂದ ಪಕ್ಷವು ಪಾರಾಗಲು ರಮೇಶ್ ಜಾರಕಿಹೊಳಿಯವರಿಂದ ರಾಜೀನಾಮೆ ಪಡೆಯುವುದು ಸೂಕ್ತ ಎಂದು ಹೈಕಮಾಂಡ್ ಅಭಿಪ್ರಾಯಪಟ್ಟಿದೆ ಎನ್ನಲಾಗುತ್ತಿದೆ.
ಪ್ರಸ್ತುತ ವಿಧಾನಸಭಾ ಚುನಾವಣೆಗಳು ಘೋಷಣೆಯಾಗಿದ್ದು ಅಖಾಡದಲ್ಲಿ ಪ್ರತಿಪಕ್ಷಗಳ ವಾಹ್ದಾಳಿಯಿಂದ ಪಾರಾಗಲು ಹರಸಾಹಸ ಪಡಬೇಕಾಗಬಹುದು. ಹಾಗಾಗಿ ಸೂಕ್ತ ನಿರ್ಧಾರಕ್ಕೆ ಬರುವುದು ಸೂಕ್ತ ಎಂದು ದೆಹಲಿ ನಾಯಕರು ಚರ್ಚಿಸಿದ್ದಾರೆನ್ನಲಾಗಿದೆ.
ಇತ್ತ, ಯಡಿಯೂರಪ್ಪ ಅವರ ನಡೆ ತೀವ್ರ ಕುತೂಹಲ ಕೆರಳುವಂತಿದೆ. ಅವರು ಕಾದುನೋಡುವ ತಂತ್ರಕ್ಕೆ ಮೊರೆಹೋಗಿದ್ದಾರೆ. ತಾವು ಅಧಿಕಾರಕ್ಕೆ ಬರಲು ರಮೇಶ್ ಜಾರಕಿಹೊಳಿಯವರೇ ಕಾರಣ. ಹಾಗಾಗಿ ಮುಂದೇನು ಮಾಡುವುದು ಎಂಬ ಚಿಂತೆ ಯಡಿಯೂರಪ್ಪ ಅವರನ್ನು ಕಾಡಿದೆ. ಆದರೂ ಕೂಡಾ ಹೈಕಮಾಂಡ್‌ನಿಂದ ಸ್ಪಷ್ಟ ಸೂಚನೆ ಬರುವವರೆಗೂ ಯಾವುದೇ ತೀರ್ಮಾನ ಕೈಗೊಳ್ಳದಿರಲು ಬಿಎಸ್‌ವೈ ನಿರ್ಧರಿಸಿದ್ದಾರೆನ್ನಲಾಗಿದೆ