ಉಡುಪಿ: ರಾಜ್ಯದ ದೇವಾಲಯಗಳ ಅಭಿವೃದ್ಧಿಗೆ ಸಂಕಲ್ಪ ಮಾಡಿರುವ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಇದೀಗ ದೇಗುಲ ಸವಾರಿ ಮೂಲಕ ಪುಣ್ಯಕ್ಷೇತ್ರಗಳ ಸ್ಥಿತಿಗತಿ ಪರಿಶೀಲಿಸುತ್ತಿದ್ದಾರೆ. ಅದರಲ್ಲೂ ದೇಗುಲಗಳ ನಾಡು ಕರಾವಳಿಯಲ್ಲಿ ಸಚಿವರ ಸಂಚಾರ ಸಂಚಲನ ಸೃಷ್ಟಿಸಿದೆ.
ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಗಳ ಸಾಲು ಸಾಲು ದೇವಾಲಯಗಳಿಗೆ ಭಾನುವಾರ ಭೇಟಿ ನೀಡಿದ ರಾಮಲಿಂಗ ರೆಡ್ಡಿಯವರು ಸ್ಥಳೀಯ ಶಾಸಕರು, ಜನ್ರತಿನಿಧಿಗಳೊಂದಿಗೆ ಅಭಿವೃದ್ಧಿ ಕುರಿತಂತೆ ಪರಾಮರ್ಶೆ ನಡೆಸಿದರು.
ಪುರಾಣ ಪ್ರಸಿದ್ದ ಉಡುಪಿಯಲ್ಲಿರುವ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಸಚಿವರು, ಶ್ರೀ ಸುಗುಣೇoದ್ರ ತೀರ್ಥ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಮುಖಂಡರಾದ ಪ್ರಸಾದ್ ರಾಜ್ ಕಾಂಚನ್, ಶಂಕರ್ ಶೆಟ್ಟಿ ಮೊದಲಾದವರು ಸಚಿವರಿಗೆ ಸಾಥ್ ನೀಡಿದ್ದರು.
ಕೋಟ ಶ್ರೀ ಅಮೃತೇಶ್ವರ ದೇವಸ್ಥಾನ:
ಉಡುಪಿ ಜಿಲ್ಲೆಯ ಕುಂದಾಪುರ ಸಮೀಪದ ಕೋಟ ಶ್ರೀ ಅಮೃತೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಸಚಿವ ರಾಮಲಿಂಗಾ ರೆಡ್ಡಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ದೇವಸ್ಥಾನದ ಕಾಮಗಾರಿಗಳಿಗೆ ಅನುದಾನ ನಿಧಿ ಬಿಡುಗಡೆ ಮಾಡುವಂತೆ ಮನವಿ ಮಾಡಿದರು. ದೇವಾಲಯ ಅಭಿವೃದ್ಧಿಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಮುಜರಾಯಿ ಸಚಿವರು ಭರವಸೆ ನೀಡಿದರು. ಈ ಕುರಿತಂತೆ ಪ್ರತಿಕ್ರಿಯಿಸಿರುವ ದೇಗುಲದ ಆಡಳಿತ ಮಂಡಳಿ ಸದಸ್ಯರು, ಸನ್ನಿಧಿಗಳ ಪುನರುತ್ಥಾನಕ್ಕೆ ಸಂಕಲ್ಪ ತೊಟ್ಟಿರುವ ಮುಜರಾಯಿ ಮಂತ್ರಿಗಳ ಈ ನಡೆ ಆಸ್ತಿಕರ ಪಾಳಯದಲ್ಲಿ ಆಶಾವಾದ ಮೂಡಿಸಿದೆ ಎಂದರು.
ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನ:
ಕುಂದಾಪುರ ತಾಲೂಕಿನ ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಇದೇ ವೇಳೆ, ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಮಲ್ಪೆ ಶ್ರೀ ವಡಭಾಂಡೇಶ್ವರ ಶ್ರೀ ಬಲರಾಮ ದೇವಸ್ಥಾನ:
ಉಡುಪಿ ಸಮೀಪದ ಮಲ್ಪೆ ಶ್ರೀ ವಡಭಾಂಡೇಶ್ವರ ಶ್ರೀ ಬಲರಾಮ ದೇವಸ್ಥಾನಕ್ಕೆ ಭೇಟಿ ನೀಡಿದ ರಾಮಲಿಂಗ ರೆಡ್ಡಿ, ಕೈಂಕರ್ಯದಲ್ಲಿ ಭಾಗಿಯಾದ ಬಳಿಕ ದೇವಸ್ಥಾನ ನವೀಕರಣ ಕೆಲಸವನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ನವೀಕರಣ ಕಾರ್ಯಕ್ಕೆ ಅನುದಾನ ನಿಧಿ ಒದಗಿಸುವಂತೆ ಆಡಳಿತ ಮಂಡಳಿ ಸದಸ್ಯರು ಮಾಡಿದ ಮನವಿಗೆ ಸಚಿವವರು ಸ್ಪಂಧಿಸಿದರು. ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ:
ಬಂಟ್ವಾಳದ ಸರಪಾಡಿ ಶ್ರೀ ಶಭರೇಶ್ವರ ದೇವಸ್ಥಾನ:
ಬಂಟ್ವಾಳದ ಸರಪಾಡಿ ಶ್ರೀ ಶಭರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಸಚಿವ ರಾಮಲಿಂಗ ರೆಡ್ಡಿ ಭಾಗಿಯಾದರು. ಈ ಸಂದರ್ಭದಲ್ಲಿ ದೇವಸ್ಥಾನದ ಪುನರ್ ನಿರ್ಮಾಣದ ಕೆಲಸ ಮತ್ತು ಮರದ ಕೆತ್ತನೆಗಳ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ದೇವಸ್ಥಾನಕ್ಕೆ ಅನುದಾನ ನೀಡುವ ಭರವಸೆ ನೀಡಿದರು. ಮಾಜಿ ಸಚಿವರಾದ ಬಿ. ರಮಾನಾಥ ರೈ, ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಮುಖಂಡರಾದ ಬೇಬಿ ಕುಂದರ್, ಸಂದೀಪ್ ಕುಮಾರ್ ಶೆಟ್ಟಿ, ಪದ್ಮಶೇಖರ್ ಜೈನ್, ಚಂದ್ರಪ್ರಕಾಶ್ ಶೆಟ್ಟಿ ಮೊದಲಾದ ಪ್ರಮುಖರು ಉಪಸ್ಥಿತರಿದ್ದರು.