ಬೆಂಗಳೂರು: ಸದಾ ಅಭಿವೃದ್ಧಿ ವಿಚಾರದಲ್ಲಿ ಮಗ್ನವಾಗುತ್ತಿದ್ದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮುಜರಾಯಿ ಇಲಾಖೆಯ ಜವಾಬ್ಧಾರಿ ಹೊತ್ತು ದೇವಾಲಯಗಳ ಕೈಂಕರ್ಯಗಳತ್ತಲೂ ಗಮನ ಕೇಂದ್ರೀಕರಿಸುತ್ತಿದ್ದಾರೆ. ಇದೀಗ ಗಣೇಶನ ಹಬ್ಬ ಸಂದರ್ಭದಲ್ಲಿ ತಮ್ಮ ಕ್ಷೇತ್ರದ ಜನರ ಜೊತೆ ಸಚಿವ ರಾಮಲಿಂಗಾ ರೆಡ್ಡಿ ವಿಶಿಷ್ಟವಾಗಿ ಉತ್ಸವ ಆಚರಿಸಲು ಮುಂದಾಗಿದ್ದಾರೆ.
ಸಾರ್ವಜನಿಕರಿಗೆ ಅನುಕೂಲವಾಗಲೆಂದು ಅವರು ತಮ್ಮ ಪುತ್ರಿಯೂ ಆದ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯಾ ರೆಡ್ಡಿ ಜೊತೆ ಉಚಿತವಾಗಿ ಗಣೇಶನ ಮಣ್ಣಿನ ವಿಗ್ರಹಗಳನ್ನು ವಿತರಿಸುತ್ತಿದ್ದಾರೆ. ಕಳೆದ 10 ರಿಂದ 15 ವರ್ಷಗಳಿಂದ ರಾಮಲಿಂಗಾರೆಡ್ಡಿ ಮತ್ತು ಸೌಮ್ಯರೆಡ್ಡಿ ಸಾರ್ವಜನಿಕರಿಗೆ ಉಚಿತವಾಗಿ ಮಣ್ಣಿನ ಗಣೇಶ ಮೂರ್ತಿಗಳನ್ನು ವಿತರಣೆ ಮಾಡುತ್ತಾ ಬಂದಿದ್ದಾರೆ. ಈ ಬಾರಿ ತಾವು ಪ್ರತಿನಿಧಿಸುತ್ತಿರುವ ಬಿಟಿಎಂ ವಿಧಾನಸಭಾ ಕ್ಷೇತ್ರದ ಹಲವೆಡೆ ಗಣೇಶ ಮೂರ್ತಿಗಳ ವಿತರಣೆ ನಡೆಸಲಿದ್ದಾರೆ.
POP ಮೂರ್ತಿಗಳಿಂದ ಪರಿಸರ ಮಾಲಿನ್ಯವಾಗುತ್ತದೆ. ಇಂತಹಾ ಮಾಲಿನ್ಯ ತಡೆಗಟ್ಟಬೇಕು, ಅಂತರ್ಜಲದ ಗುಣಮಟ್ಟ ಯಾವುದೇ ಹಾನಿಕಾರಕವಾಗದಂತೆ ಕಾಪಾಡಬೇಕು, ಹಾಗಾಗಿ ನೈಸರ್ಗಿಕ ಸಮತೋಲನ ಕಾಪಾಡುವಲ್ಲಿ ಸಹಕಾರಿಯಾಗುವ ಮಣ್ಣಿನ ಗಣಪತಿ ವಿಗ್ರಹ ಸ್ಥಾಪನೆ ಮಾಡಿ, ವಿಸರ್ಜಿಸುವುದು ಪರಿಸರ ಸ್ನೇಹಿ ಕ್ರಮ ಎಂಬುದನ್ನು ಸಾರುತ್ತಾ ಸಚಿವ ರಾಮಲಿಂಗಾರೆಡ್ಡಿ ಮತ್ತು ಸೌಮ್ಯರೆಡ್ಡಿ ನೇತೃತ್ವದಲ್ಲಿ ಉಚಿತವಾಗಿ ಮಣ್ಣಿನ ಗಣೇಶಗಳನ್ನು ವಿತರಿಸಲಾಗುತ್ತಿದೆ ಎಂದು ಅವರ ಆಪ್ತರು ಮಾಹಿತಿ ಹಂಚಿಕೊಂಡಿದ್ದಾರೆ.
26.08.2025 ರಂದು ಬೆಳಿಗ್ಗೆ 8.30 ರ ಸುಮಾರಿಗೆ ಕೊರಮಂಗಲದಲ್ಲಿರುವ ಶಾಸಕರ ಕಚೇರಿಯಲ್ಲಿ ವಿಗ್ರಹ ವಿತರಿಸಲಾಗುತ್ತದೆ. ಬೆಳಿಗ್ಗೆ 9.00 ಗಂಟೆಗೆ ಜಯನಗರದ ಎಲ್. ಐ. ಸಿ ಕಾಲೋನಿಯಲ್ಲಿ ವಿಗ್ರಹ ಹಂಚಲಾಗುತ್ತದೆ. ಬೆಳಿಗ್ಗೆ 9.30ಕ್ಕೆ ಸಾರಕ್ಕಿಯ ಇಂದಿರಾಗಾಂಧಿ ಪ್ರತಿಮೆ ಬಳಿ ಅರುಣ್ ಕುಮಾರ್ ನೇತೃತ್ವದಲ್ಲಿ ಗಣಪತಿ ಮೂರ್ತಿಗಳನ್ನು ವಿತರಿಸಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಶಾಸಕರ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.