ಬೆಂಗಳೂರು: ನಿವೃತ್ತ ನ್ಯಾಯಮೂರ್ತಿ, ಮಾಜಿ ರಾಜ್ಯಪಾಲ, ನ್ಯಾಯ ವಿದ್ವಾಂಸ ನ್ಯಾ.ಮೂ. ಎಂ.ರಾಮಾ ಜೋಯಿಸ್ ನಿಧನಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಶೋಕ ವ್ಯಕ್ತಪಡಿಸಿದ್ದಾರೆ.
ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಹಲವು ಮೈಲುಗಲ್ಲು ತೀರ್ಪು ನೀಡಿ ನ್ಯಾಯಾಂಗ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದರು. ಭಾರತದ ಪುರಾತನ ನ್ಯಾಯಶಾಸ್ತ್ರ ಗ್ರಂಥಗಳನ್ನು ಆಳವಾಗಿ ಅಭ್ಯಸಿಸಿದ್ದರು. ಕಾನೂನು ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಇದಮಿತ್ಥಂ ಎಂಬಂಥ ಗ್ರಂಥಗಳಿಗೆ ಲೇಖಕರಾಗಿದ್ದರು. ಕನ್ನಡ, ಇಂಗ್ಲೀಷ್, ಸಂಸ್ಕ್ರತ ಭಾಷೆಯ ಮೇಲೆ ಪ್ರಭುತ್ವ ಹೊಂದಿದ್ದರು.
ರಾಜ್ಯಸಭಾ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದ ಅವರು ಜಾರ್ಖಂಡ್ ಹಾಗೂ ಬಿಹಾರದ ರಾಜ್ಯ ಪಾಲರಾಗಿ ಕರ್ತವ್ಯ ನಿರ್ವಹಿಸಿದ್ದರು. ರಾಷ್ಟ್ರದ ಸಾರ್ವಜನಿಕ ಬದುಕಿನ ಮೇಲೆ ಪ್ರಭಾವ ಬೀರಿದ್ದ ರಾಮಾ ಜೋಯಿಸ್ ನಿಧನದಿಂದ ನ್ಯಾಯಾಂಗ ಹಾಗೂ ಸಾರ್ವಜನಿಕ ಬದುಕಿಗೆ ತುಂಬಲಾರದ ನಷ್ಟವಾಗಿದೆ. ನನ್ನನ್ನೂ ಸೇರಿ ರಾಜ್ಯದ ಹಿರಿಯ ನಾಯಕರಿಗೆ ಅವರು ಗುರು ಸ್ಥಾನದಲ್ಲಿದ್ದರು. ಅವರ ಅಗಲಿಕೆಯನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ಕುಟುಂಬ ವರ್ಗಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಿ.ಟಿ.ರವಿ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.