📝 ಎಸ್ ನಾವೂರ್ ಬರೆಯುತ್ತಾರೆ..
“ಅಮ್ಮನ ವಾತ್ಸಲ್ಯ, ಅಪ್ಪನ ಮಮತೆ, ಅಣ್ಣನ ಕರುಣೆ, ಸೋದರಿಯ ಪ್ರೀತಿಯ ಆಸರೆಯ ಕೊಂಡಿಯೇ ಈ ‘ನೂಲು’. ಈ ಸಣ್ಣ ದಾರದಿಂದಲೇ ಸುಭದ್ರ ದೇಶ ಕಟ್ಟುವ ಪರಿಕಲ್ಪನೆಯೇ ಶ್ರೇಷ್ಠ..”
ಆಕೈಗೆ ರಕ್ಷೆ ಕಟ್ಟಿ ಕಾಲು ಹಿಡಿದು ಆರ್ಶಿವಾದ ಪಡೆಯಬೇಕೆಂದು ಅಣ್ಣ ಬರುವ ದಾರಿಯ ಕಡೆ ದೃಷ್ಟಿ ಇಟ್ಟು ಆತನ ಬರುವಿಕೆಗೆ ಕಾಯುತ್ತಿರುವ ತಂಗಿಯಂದಿರು. ಅಕ್ಕನ ಕೈಗೆ ರಕ್ಷೆ ಕಟ್ಟಿ ಕಾಲು ಹಿಡಿದು ಆರ್ಶಿವಾದ ಬೇಡಬೇಕೆಂಬ ಮನದಾಸೆ ಹೊತ್ತಿರುವ ತಮ್ಮ. ತಮ್ಮನ ಕೈಗೆ ರಾಕಿ ಕಟ್ಟಿ ಆತ ನನ್ನ ಬಾಯಿಗೆ ಸಿಹಿ ತಿನ್ನಿಸುತ್ತಾನೆಂದು ಎಂದು ಕಾಯುವ ಅಕ್ಕ. ಹೀಗೆ ಕುಟುಂಬ, ಮನೆಯೊಳಗೆ ಬೆಸೆಯುವ ಬಾಂಧವ್ಯ ಒಂದು ಕಡೆಯಾದರೆ, ಮನಸ್ಸಿನಲ್ಲಿ ಸೋದರತೆಯ ಭಾವ ಮೂಡಿ ತನ್ನ ಮನೆಯವರಲ್ಲ ಕುಟುಂಬದವರಲ್ಲದಿದ್ದರೂ ತನ್ನ ಪರಿವಾರದ ಒಬ್ಬ ಸದಸ್ಯ ಎಂಬ ಭಾವದಿ ಹೃದಯ ತುಂಬಿ ಬಂದು ಬಾಯಿತುಂಬಾ ಅಕ್ಕ, ಅಣ್ಣ, ತಂಗಿ ತಮ್ಮ ಎಂದು ಕರೆಯುವ ಸೋದರತೆಯ ಪ್ರೀತಿಯ ತೋರಿಸುವ ಜೀವಿಗಳು ಒಂದು ಕಡೆ. ಈ ಪವಿತ್ರ ಸೋದರತೆಯ ಭಾವ ಬಂಧವನ್ನು ಸಂಬಂಧವನ್ನು ಒಂದು ನೂಲು ಬೆಸೆದು ಕೊಂಡಿದೆ. ಅದುವೇ ರಕ್ಷಾಬಂಧನ.
ಅ ನೂಲಿನಲ್ಲಿದೆ ತಾಯಿಯ ಅಪ್ಪುಗೆಯ ವಾತ್ಸಲ್ಯ, ತಂದೆಯ ಕಾಳಜಿಯ ಮಮತೆ, ಅಣ್ಣನ ಮುನಿಸಿನ ಕರುಣೆ, ಅಕ್ಕನ ಸಾಂತ್ವನದ ಪ್ರೀತಿಯ ಜೊತೆಗೆ ರಾಷ್ಟ್ರವನ್ನು ಕಟ್ಟುವ ಮನಸ್ಸುಗಳನ್ನು ಒಟ್ಟು ಮಾಡುವ ಪುಣ್ಯದ ಫಲವನ್ನು ಕೂಡ ಒಂದು ನೂಲು ಬೆಸೆದು ಕೊಂಡಿದೆ.
ಭಾರತ ಇಡೀ ವಿಶ್ವದವರನ್ನು ಸೋದರ ಸೋದರಿಯರು ಎಂಬ ಭಾಂದವ್ಯದಿ ನೋಡಿದ, ನೋಡುತ್ತಿರುವ ರಾಷ್ಟ. ಅಂದ ಹಾಗೆ ಈ ಪುಣ್ಯ ಭೂಮಿಯಲ್ಲಿ ಸೋದರತೆಯ ಭಾವವನ್ನು, ಭಾಂದವ್ಯವನ್ನು ಒಂದು ‘ನೂಲು’ ಬೆಸೆದು ಕೊಂಡಿದೆ ಎಂದರೆ ನಮ್ಮ ಮೂಲ ನಂಬಿಕೆಗಳು ಸಂಸ್ಕಾರ, ಸಂಸ್ಕೃತಿ ಎಷ್ಟು ಶ್ರೀಮಂತವಾಗಿದೆ ಅಲ್ಲವೇ.
ಇದು ಈ ದೇಶದ ಪ್ರತಿಯೊಬ್ಬ ದೇಶಪ್ರೇಮಿಯು ‘ವಾ ನನ್ನ ಭಾರತವೇ’ ಎಂದು ಹೆಮ್ಮೆಯಿಂದ ಎದೆ ಎತ್ತುವಂತೆ ಮಾಡಿದೆ, ಮಾಡುತ್ತಿದೆ. ಸೋದರತೆಯ ಭಾವ ಬೆಸೆದು ಅಕ್ಕನ ಪ್ರೀತಿ, ತಮ್ಮನ ಪ್ರೀತಿ ನೀಡಿ ಸೋದರತೆಯ ಭಾವದಿ ತಬ್ಬಿಕೊಂಡು ಸೋದರತೆಯ ನಿರ್ಮಲ ಪ್ರೇಮದ ಸಿಂಚನ ಮಾಡಿ, ಅಭ್ಯುದಯಕ್ಕೆ ಮುನ್ನುಡಿ ಬರೆಯುತ್ತಿದೆ.