‘ರಾಖಿ’ ಎಂಬುದು ಬರೀ ‘ಶೋಕಿ’ ಅಲ್ಲ.. ಮಾನ-ಪ್ರಾಣ-ಮಾಂಗಲ್ಯ ರಕ್ಷಣೆಯ ಸೂತ್ರ… 474 ವರ್ಷಗಳ ನಂತರ ಈ ಬಾರಿ ವಿಶೇಷ ದಿನ.. ಪಂಚಾಂಗ ಪ್ರಕಾರ ಸೂರ್ಯ-ಗುರು-ಬುಧ ರಾಶಿ ಚಿಹ್ನೆಗಳು ಸಂಯೋಜನೆಯಾಗಿರುವ ಈ ದಿನದಂದು ರಾಖಿ ಕಟ್ಟಿಸಿಕೊಡವರಿಗೆ ‘ಗಜಕೇಸರಿ ಯೋಗ’ ಕೂಡಿಬರಲಿದೆ ಎನ್ನುತ್ತಿದ್ದಾರೆ ಜ್ಯೋತಿಷಿಗಳು..
ರಕ್ಷಾ ಬಂಧನ. ಸೋದರ ಸೋದರಿಯರ ಬಂಧುತ್ವದ ಮಹಾಹಬ್ಬ. ಸೋದರತೆಯ ನಿರ್ಮಲ ಪ್ರೇಮದ ಸಂಕೇತವಾಗಿರುವ ಈ ರಕ್ಷೆಯಲ್ಲಿ ಬಂಧುತ್ವ ಬೆಳೆಸುವ ಶಕ್ತಿ ಇದೆ. ಹಾಗಾಗಿಯೇ ಭಾರತಾಂಬೆಯ ಮಕ್ಕಳೆಲ್ಲರನ್ನೂ ಒಂದಾಗಿಸುವ ಹಬ್ಬವನ್ನಾಗಿ ಆಚರಿಸುವ ಸನ್ನಿವೇಶಗಳನ್ನು ದೇಶದೆಲ್ಲೆಡೆ ನೋಡುತ್ತೇವೆ.
ಮಾನ-ಪ್ರಾಣ-ಮಾಂಗಲ್ಯದ ರಕ್ಷಣೆಯ ಅಸ್ತ್ರವೂ ಇದಾಗಿದೆ. ಜಾತಿ-ಧರ್ಮ-ಸೀಮೆಯನ್ನು ದಾಟಿ ಸಂಬಂಧದ ಬೆಸುಗೆಯ ಸೂತ್ರವು ಈ ರಕ್ಷಾ ಬಂಧನ. ರಕ್ಷೆಯಲ್ಲಿ ಬಂಧಿಯಾಗುವ ಪರಿಕಲ್ಪನೆ ಇದೀಗ ಉತ್ಸವ ರೂಪದಲ್ಲಿ ನಡೆಯುತ್ತಿರುವುದೇ ವಿಶೇಷ. ಅದರಲ್ಲೂ ಭಾರತಾಂಬೆಯ ಮಕ್ಕಳೆಲ್ಲರನ್ನೂ ಒಗ್ಗಟ್ಟಾಗಿಸುವ ಹಬ್ವವಾಗಿ, ರಾಷ್ಟ್ರೀಯತೆಯ ಪರ್ವವಾಗಿ ಆರೆಸ್ಸೆಸ್ ಕೂಡಾ ಆಚರಿಸುತ್ತಿದೆ. ಉಪವಸತಿ ಮಟ್ಟದಲ್ಲಿ ನಡೆಯುತ್ತಿರುವ ಈ ರಕ್ಷಾ ಬಂಧನ ಕಾರ್ಯಕ್ರಮಗಳು ಅಬಾಲ-ವೃದ್ಧರಿಗೂ ಸಡಗರದ ಕ್ಷಣ.
ಪ್ರತೀ ವರ್ಷ ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ರಕ್ಷಾ ಬಂಧನ ಆಚರಿಸುವುದು ಪುರಾಣದಿಂದಲೂ ನಡೆದು ಬಂದಿರುವ ಸಂಪ್ರದಾಯ. ಇದು ಕೇವಲ ಆರೆಸ್ಸೆಸ್ ಕಾರ್ಯಕ್ರಮವಲ್ಲ. ಆರೆಸ್ಸೆಸ್ ಉದಯಕ್ಕೂ ಮುಂಚೆಯೇ ಇದ್ದ ಸಂಸ್ಕೃತಿ. ಈ ರಕ್ಷಾ ಬಂಧನ ಮೂಲಕ ಸರ್ವ ಧರ್ಮೀಯರನ್ನು ಒಗ್ಗೂಡಿಸುವ ಅವಕಾಶ ಇದೆ ಎಂಬುದನ್ನು ಮನಗಂಡ ಸಂಘದ ಹಿರಿಯರು ವಿಶೇಷ ಆಚರಣೆಗೆ ಆದ್ಯತೆ ನೀಡಿರುವುದು. ಕೇವಲ ಆಚರಣೆಯ ಧರ್ಮವಲ್ಲದೆ, ಎಲ್ಲಾ ಜಾತಿ-ಪಂಥದವರೆಲ್ಲರನ್ನೂ ಕರೆಸಿ ಶ್ರೀರಕ್ಷೆ ಕಟ್ಟಿಸಿ ಸಹೋದರತೆ ಸಾರುವ ಮೂಲಕ ರಾಷ್ಟ್ರೀಯತೆಯ ಮಹಾಹಬ್ಬವನ್ನಾಗಿ ಆಚರಿಸಲಾಗುತ್ತದೆ.
‘ಗಜಕೇಸರಿ..’ ಈ ಬಾರಿ ಮತ್ತಷ್ಟು ವಿಶೇಷ..
ಈ ಬಾರಿಯ ಶ್ರಾವಣ ಹುಣ್ಣಿಮೆ ವಿಶಿಷ್ಠವಾಗಿದೆ. ಹಿಂದೂ ಪಂಚಾಂಗ ಪ್ರಕಾರ ಈ ಬಾರಿ ಧನಿಷ್ಠಾ ನಕ್ಷತ್ರದ ಶ್ರಾವಣ ಹುಣ್ಣಿಮೆ. ಇದು ಅಪರೂಪದಲ್ಲಿ ಅಪರೂಪದ ಸಂದರ್ಭ. ಅಪೂರ್ವ ಎಂಬಂತೆ ಈ ಬಾರಿ ಸೂರ್ಯ, ಮಂಗಳ ಮತ್ತು ಬುಧ ಒಟ್ಟಾಗಿ ಸಿಂಹ ರಾಶಿಯಲ್ಲಿ ಒಗ್ಗೂಡಿದ್ದಾರೆ. ರಾಶಿ ಗ್ರಹಗಳ, ರಾಶಿ ಚಕ್ರಗಳ ವಿಶೇಷ ಸಂಯೋಜನೆಯು ಒಳ್ಳೆಯ ಸಂದರ್ಭ ಎಂಬುದು ಜ್ಯೋತಿಷಿಗಳ ಅಭಿಪ್ರಾಯ. ಜ್ಯೋತಿಷಿಗಳ ಪ್ರಕಾರ ಸುಮಾರು 474 ವರ್ಷಗಳ ನಂತರ ಈ ಬಾರಿ ಇಂತಹ ಸಂಯೋಜನೆ ನಡೆದಿದೆಯಂತೆ.
ಅಷ್ಟೇ ಅಲ್ಲ, ಗುರು ಮತ್ತು ಚಂದ್ರನ ಮುಖಾಮುಖಿಯ ಸನ್ನಿವೇಶವೂ ನಡೆದಿದೆ. ಹಾಗಾಗಿ ಈ ಬಾರಿಯ ರಕ್ಷಾಬಂಧನದಂದು ಗಜಕೇಸರಿ ಯೋಗ ರೂಪುಗೊಳ್ಳುತ್ತದೆಯಂತೆ. ಈ ಬಾರಿ ರಕ್ಷಾಬಂಧನದ ಸಂದರ್ಭದಲ್ಲಿ ರಾಖಿ ಕಟ್ಟಿಸಿಕೊಂಡವರಿಗೆ ಧನಲಾಭ, ಮನೆ ಲಾಭ, ವಾಹನ ಲಾಭ ಸಹಿತ ಆಯರಾರೋಗ್ಯ ಐಶ್ವರ್ಯ ವೃದ್ದಿಯಾಗಲಿದೆ ಎಂಬುದು ಜ್ಯೋತಿಷಿಗಳ ವಿಷ್ಲೇಷಣೆ.