ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮೂರು ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ ಒಂದು ಸ್ಥಾನವನ್ನು ಜಯಿಸಿದೆ. ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿಗೆ ಸೋಲು ಉಂಟಾಗಿದ್ದು ರಾಜ್ಯಸಭಾ ಅಖಾಡ ಕುರಿತಂತೆ ಇದ್ದ ಕುತೂಹಲಕ್ಕೆ ತೆರೆಬಿದ್ದಿದೆ.
ಮಂಗಳವಾರ ನಡೆದ ಚುನಾವಣೆಯಲ್ಲಿ ವಿಧಾನಸಭೆಯ 224 ಸದಸ್ಯರ ಪೈಕಿ ಪೈಕಿ 222 ಮಂದಿ ಮತ ಚಲಾಯಿಸಿದ್ದಾರೆ. ಕಾಂಗ್ರೆಸ್ ಶಾಸಕ ರಾಜಾವೆಂಕಟಪ್ಪ ನಾಯಕ ಅವರು ವಿಧಿವಶರಾಗಿದ್ದರೆ, ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಅವರು ಮತದಾನದಿಂದ ದೂರ ಉಳಿದಿದ್ದರು.
ಕಾಂಗ್ರೆಸ್ ಅಭ್ಯರ್ಥಿಗಳಾದ ಅಜಯ್ ಮಾಕೆನ್, ನಾಸೀರ್ ಹುಸೇನ್, ಜಿ.ಸಿ. ಚಂದ್ರಶೇಖರ್ ಹಾಗೂ ಬಿಜೆಪಿಯ ನಾರಾಯಣ ಸಾ. ಭಾಂಡಗೆ ಅವರು ಜಯಗಳಿಸಿದ್ದಾರೆ.
ಅಜಯ್ ಮಾಕೆನ್ ಹಾಗೂ ನಾಸೀರ್ ಹುಸೇನ್, ನಾರಾಯಣ ಸಾ.ಭಾಂಡಗೆ ಅವರಿಗೆ ತಲಾ 47 ಮತಗಳು ಸಿಕ್ಕಿದರೆ, ಜಿ.ಸಿ. ಚಂದ್ರಶೇಖರ್ ಅವರು 45 ಮತಗಳನ್ನು ಗಳಿಸಿದರು. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರು 36 ಮತಗಳನ್ನು ಗಳಿಸಿದ್ದಾರೆ.