ನವದೆಹಲಿ: ಈ ಬಾರಿಯ ಚುನಾವಲ್ಲಿ ಗದ್ದರಷ್ಟೇ ಅಲ್ಲ 2029ರಲ್ಲೂ ನರೇಂದ್ರ ಮೋದಿಯವರೇ ಈ ದೇಶದ ಪ್ರಧಾನಿಯಾಗಲಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ರಾಷ್ಟ್ರೀಯ ಮಾಧ್ಯಮ ಟೈಮ್ಸ್’ಗೆ ಸಂದರ್ಶನ ನೀಡಿರುವ ಸಚಿವ ರಾಜನಾಥ್ ಸಿಂಗ್, 2024ರಲ್ಲಿ ಮಾತ್ರವಲ್ಲ 2029ರಲ್ಲಿಯೂ ಮೋದಿಯೇ ಪ್ರಧಾನಿಯಾಗಲಿದ್ದಾರೆ ಎಂದು ಹೇಳಿದ್ದಾರೆ. ಬಿಜೆಪಿಯಲ್ಲಿ 75 ವರ್ಷ ಮೇಲ್ಪಟ್ಟವರು ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎನ್ನುವ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದಿರುವ ಅವರು, ಬಿಜೆಪಿಯಲ್ಲಿ 75 ವರ್ಷ ಮೇಲ್ಪಟ್ಟವರಿಗೆ ಅವಕಾಶ ಇಲ್ಲ ಎಂಬ ನಿಯಮ ಇರುತ್ತಿದ್ದರೆ ಎಲ್.ಕೆ.ಅಡ್ವಾಣಿ ಅವರು 2014ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರಲಿಲ್ಲ ಎಂಬ ಸ್ಪಷ್ಟನೆಯನ್ನೂ ಅವರು ನೀಡಿದ್ದಾರೆ.
ಮೋದಿಯವರ ಮುಂದುವರಿಕೆಗೆ ವಯಸ್ಸು ಅಡ್ಡಿಯಾಗಲ್ಲ ಎಂದು ವಿಶ್ಲೇಷಿಸಿರುವ ಅವರು, ಮೋದಿಯವರೇ ಮುಂದಿನ ಪ್ರಧಾನಿ ಎಂಬುದನ್ನು ಮಂಡಳಿ ಈಗಾಗಲೇ ಪ್ರಕಟಿಸಿದೆ ಅಷ್ಟೇ ಅಲ್ಲ 2029ರಲ್ಲೂ ಮೋದಿಯೇ ಪ್ರಧಾನಿಯಾಗಲಿದ್ದಾರೆ ಎಂದು ಪುನರುಚ್ಚರಿಸಿದ್ದಾರೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ. ಅದರಲ್ಲೂ ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳದಲ್ಲೂ ಸಾಕಷ್ಟು ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದು ರಾಜನಾಥ್ ಸಿಂಗ್ ತಮ್ಮ ಪಕ್ಷದ ಲೆಕ್ಕಾಚಾರವನ್ನು ವಿವರಿಸಿದ್ದಾರೆ.