ರಾಯಚೂರು: ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಕೆಲವು ಕ್ಷೇತ್ರಗಳಲ್ಲಿ ಬಂಡಾಯ ಅಭ್ಯರ್ಥಿಗಳ ನಡೆ ತೀವ್ರ ಕುತೂಹಲ ಕೆರಳುವಂತಾಗಿದೆ. ಎರಡನೇ ಹಂತದ ಚುನಾವಣೆ ನಡೆಯುವ ಜಿಲ್ಲೆಗಳು ಬಂಡಾಯ ಅಭ್ಯರ್ಥಿಗಳ ಸೆಣಸಾಟದಿಂದಾಗಿ ಗಮನಸೆಳೆದಿವೆ.
ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಸಿಗದೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಬಿ.ವಿ.ನಾಯಕ್ ಅವರ ಉಮೇದುವಾರಿಕೆ ತಿರಸ್ಕೃತಗೊಂಡಿದೆ. ಈ ಬೆಳವಣಿಗೆಯಿಂದಾಗಿ ಬಿಜೆಪಿಯ ಅಧಿಕೃತ ಅಭ್ಯರ್ಥಿ ನಿರಾಳರಾಗಿದ್ದಾರೆ.
ಬಂಡಾಯದ ಬಾವುಟ ಹಾರಿಸಿದ್ದ ‘ನಾಯಕ’:
ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಕೈ ತಪ್ಪಿದ್ದ ಹಿನ್ನೆಲೆ ಬಿ.ವಿ.ನಾಯಕ್ ಅವರು ಪಕ್ಷದ ವರಿಷ್ಠರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಅವರ ಕೋಪ ತಣಿಸಲು ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಅಗರವಾಲ್ ಖುದ್ದು ಸಂಧಾನದ ಅಖಾಡಕ್ಕೆ ಧುಮುಕಿದ್ದರು. ಅಗರವಾಲ್ ಅವರು ಬಿ.ವಿ.ನಾಯಕ್ ಅವರ ಮನವೊಲಿಸಿ ರಾಜಾ ಅಮರೇಶ್ವರ ನಾಯಕ್ಗೆ ಬಿ ಫಾರ್ಮ್ ಕೊಡಿಸಿದ್ದರು.
ಆದರೆ, ಎಲ್ಲಾ ವಿವಾದ ಬಗೆಹರಿಯಿತು ಎನ್ನುವಾಗಲೇ ಬಿ.ವಿ.ನಾಯಕ್ ಅವರು ಅಜ್ಞಾತ ಸ್ಥಳದಿಂದಲೇ ನಾಮಪತ್ರ ಸಲ್ಲಿಸಿದ್ದರು. ಅವರು ಬಿಜೆಪಿಯಿಂದಲೇ ನಾಮಪತ್ರ ಸಲ್ಲಿಸಿದ್ದ ಕಾರಣಕ್ಕಾಗಿ ಉಮೇದುವಾರಿಕೆ ತಿರಸೃತವಾಗಿದೆ ಎನ್ನಲಾಗಿದೆ. ಇದೀಗ ಬಿಜೆಪಿಯ ಅಧಿಕೃತ ಅಭ್ಯರ್ಥಿ ಕೊಂಚ ನಿರಾಳರಾಗಿದ್ದಾರೆ. ಆದರೆ, ಬಿ.ವಿ.ನಾಯಕ್ ಅವರ ಮುಂದಿನ ನಡೆ ಸವಾಲಾಗಿ ಪರಿಣಮಿಸಿದೆ.