ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನೀಡಿದ ಗ್ಯಾರೆಂಟಿ ಭರವಸೆ ಇದೀಗ ಸಂಚಲನ ಸೃಷ್ಟಿಸಿದೆ. ‘ವಾರ್ಷಿಕ 1 ಲಕ್ಷ ಹಾಗೂ ತಿಂಗಳಿಗೆ 8 ಸಾವಿರ ರೂ ಕೊಡುತ್ತೇವೆಂಬ’ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ ಭರವಸೆ ಇದೀಗ ಮಹಿಳೆಯರಲ್ಲಿ ಗೊಂದಲ ಸೃಷ್ಟಿಸಿದೆ. ತಮ್ಮ ಖಾತೆಗೆ ಹಣ ಬಂದೇ ಬರುತ್ತೆ ಎಂಬ ಆಸೆಯಿಂದ ಖಾತೆ ತೆರೆಯಲು ಮಹಿಳೆಯರು ಪೋಸ್ಟ್ ಆಫೀಸ್’ಗಳಲ್ಲಿ ಮುಗಿಬಿದ್ದಿದ್ದಾರೆ.
ರಾಹುಲ್ ಗಾಂಧಿಯವರ ‘ಟಕಾ ಟಕ್’ ಭಾಷಣವೇ ಮಹಿಳೆಯರ ಗ್ಯಾರೆಂಟಿ ಆಸೆಯನ್ನು ನೂರ್ಮಡಿಗೊಳಿಸಿದ್ದು, ಈ ಕಾರಣದಿಂದಾಗಿ ಅಂಚೆ ಕಚೇರಿಗಳು ಜನಜಾತ್ರೆಗೆ ಸಾಕ್ಷಿಯಾಗುತ್ತಿದೆ. ಈ ‘ಟಕಾ ಟಕ್’ ಭರವಸೆಗೂ ಅಂಚೆ ಕಚೇರಿಯಲ್ಲಿನ ಖಾತೆಗೂ ಯಾವ ಸಂಬಂಧವಿದೆಯೋ ಗೊತ್ತಿಲ್ಲ, ಆದರೂ ತಿಂಗಳಿಗೆ ಎಂಟೂವರೆ ಸಾವಿರ ರೂಪಾಯಿ ಹಣ ಬರುತ್ತೆ ಎಂಬ ನಿರೀಕ್ಷೆಯಲ್ಲಿ ಹಿಂದೂ ಮುಂದು ನೋಡದೆ ಮಹಿಳೆಯರು ಅಂಚೆ ಕಚೇರಿಗಳತ್ತ ಲಗ್ಗೆ ಹಾಕುತ್ತಿದ್ದಾರೆ.
ಈ ನಡುವೆ, ‘ಯಾವುದೇ ಹಣ ಬರಲ್ಲ’ ಎಂಬ ಫಲಕವನ್ನು ಸದ್ಯ ಅಂಚೆ ಕಚೇರಿಗಳಲ್ಲಿ ನೇತು ಹಾಕಿದ್ದರೂ ಖಾತೆ ತೆರೆಯಲು ಮಹಿಳೆಯರು ಸಾಲುಗಟ್ಟಿ ನಿಂತಿರುವ ಬೆಳವಣಿಗೆ ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಗಿದೆ.