ಅಂದು ಭಾರತ್ ಜೋಡೋಯಾತ್ರೆ ಇದೀಗ ‘ಭಾರತ್ ನ್ಯಾಯ್ ಯಾತ್ರೆ’ ಜನವರಿ 14ರಿಂದ ರಾಹುಲ್ ಗಾಂಧಿ ಪೂರ್ವದಿಂದ ಪಶ್ಚಿಮಕ್ಕೆ ನಡಿಗೆ
ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಜನವರಿ 14 ರಂದು ಮಣಿಪುರದಿಂದ 6,200 ಕಿಮೀ ‘ಭಾರತ್ ನ್ಯಾಯ್ ಯಾತ್ರೆ’ಯನ್ನು ಪ್ರಾರಂಭಿಸಲಿದ್ದಾರೆ. 14 ರಾಜ್ಯಗಳ 85 ಜಿಲ್ಲೆಗಳನ್ನು ಇದು ಕ್ರಮಿಸಲಿದ್ದು, ಮಾರ್ಚ್ 20 ರಂದು ಮುಂಬೈನಲ್ಲಿ ಮುಕ್ತಾಯಗೊಳ್ಳಲಿದೆ.
ಇಂದು ಈ ಕುರಿತು ಮಾಹಿತಿ ನೀಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್ ಮತ್ತು ಜೈರಾಮ್ ರಮೇಶ್, ಜನವರಿ 14 ರಂದು ಇಂಫಾಲ್‌ನಿಂದ ಈ ಯಾತ್ರೆ ಆರಂಭವಾಗಲಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು. ದೇಶದ ಜನತೆಗೆ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ನ್ಯಾಯ ದೊರಕಿಸಿಕೊಡುವುದಕ್ಕಾಗಿ ನ್ಯಾಯ ಯಾತ್ರೆ ನಡೆಯಲಿದೆ ಎಂದರು.
ಡಿಸೆಂಬರ್ 21 ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸರ್ವಾನುಮತದ ನಿರ್ಣಯದ ನಂತರ ಗಾಂಧಿಯವರು ಪೂರ್ವದಿಂದ ಪಶ್ಚಿಮಕ್ಕೆ ಎರಡನೇ ಹಂತದ ಯಾತ್ರೆಯನ್ನು ಮಾಡಬೇಕೆಂದು ಹಾಗೂ ಇಂಫಾಲದಿಂದ ಈ ಯಾತ್ರೆಯನ್ನು ಆರಂಭಿಸಬೇಕೆಂದು ನಿರ್ಧರಿಸಲಾಯಿತು ಎಂದರು.
ಮೊದಲ ಹಂತದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 12 ರಾಜ್ಯಗಳಲ್ಲಿ ಸುಮಾರು 4,500 ಕಿ.ಮೀ ಕ್ರಮಿಸಿದರೆ, ಈ ಬಾರಿ 14 ರಾಜ್ಯಗಳಲ್ಲಿ 6,200 ಕಿ.ಮೀ ಕ್ರಮಿಸಲಿದ್ದಾರೆ ಎಂದರು.
ಮಣಿಪುರ, ನಾಗಾಲ್ಯಾಂಡ್, ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಒರಿಸ್ಸಾ, ಛತ್ತೀಸ್‌ಗಢ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರಗಳನ್ನು ಈ ಯಾತ್ರ ಕ್ರಮಿಸಲಿದೆ ಎಂದವರು ವಿವರಿಸಿದರು.
ಭಾರತ್ ಜೋಡೋ ಯಾತ್ರೆಯಲ್ಲಿ ಗಾಂಧಿಯವರು ಆರ್ಥಿಕ ಅಸಮಾನತೆ, ಧ್ರುವೀಕರಣ ಮತ್ತು ಸರ್ವಾಧಿಕಾರದ ವಿಷಯಗಳನ್ನು ಪ್ರಸ್ತಾಪಿಸಿದರೆ, ನ್ಯಾಯ ಯಾತ್ರೆಯು ದೇಶದ ಜನರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯದ ಮೇಲೆ ಕೇಂದ್ರೀಕರಿಸುತ್ತದೆ ಎಂದು ರಮೇಶ್ ಹೇಳಿದರು.
ಭಾರತ ಜೋಡೋ ಯಾತ್ರೆಯ ಮೂಲಕ ಏಕತೆ, ಪ್ರೀತಿ ಮತ್ತು ಸೌಹಾರ್ದತೆಯ ಸಂದೇಶವನ್ನು ಹರಡಿದ ನಂತರ, ರಾಹುಲ್ ಗಾಂಧಿಯವರು ದೇಶದ ಜನರಿಗೆ ನ್ಯಾಯವನ್ನು ಕೇಳುತ್ತಾರೆ ಎಂದು ಅವರು ಹೇಳಿದರು.






















































