ಮಂಗಳೂರು: ಹೇಳಿಕೊಳ್ಳೋಕೆ ಇವರಿಬ್ಬರೂ ತಾಯಿ-ಮಗಳು. ಆದರೆ ಶಿಕ್ಷಣದ ವಿಚಾರದಲ್ಲಿ ಇವರಿಬ್ಬರೂ ಸಹಪಾಠಿಗಳು. ಈ ತಾಯಿ-ಮಗಳು ಈ ಬಾರಿ ಪಿಯುಸಿ ಪರೀಕ್ಷೆಯನ್ನು ಒಟ್ಟೊಟ್ಟಿಗೆ ಬರೆದು ಉತ್ತೀರ್ಣರಾಗಿ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದ್ದರೆ. ಈ ಫಲಿತಾಂಶಕ್ಕೆ ಸಾಕ್ಷಿಯಾದದ್ದು ದಕ್ಷಿಣಕನ್ನಡ ಜಿಲ್ಲೆ ಸುಳ್ಯ.
ಸುಳ್ಯ ಜಯನಗರದ ರಮೇಶ್ ಎಂಬವರ ಪತ್ನಿ ಗೀತಾ ಮತ್ತು ಅವರ ಪುತ್ರಿ ತ್ರಿಶಾ ಒಟ್ಟಿಗೆ ಪಿಯುಸಿ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದಾರೆ. ಸುಳ್ಯದ ಪೊಲೀಸ್ ಠಾಣೆಯಲ್ಲಿ ಗೃಹರಕ್ಷಕ ದಳ ಸಿಬ್ಬಂದಿಯಾಗಿರುವ ಗೀತಾ ವೃತ್ತಿ ಜೀವನದ ಮಧ್ಯೆಯೂ ಅಧ್ಯಯನ ನಡೆಸಿ ಖಾಸಗಿಯಾಗಿ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದಿದ್ದಾರೆ. 45ನೇ ವಯಸ್ಸಿನಲ್ಲಿ ಅವರು ಪಿಯುಸಿ ಪರೀಕ್ಷೆ ಉತ್ತೀರ್ಣರಾಗಿದ್ದಾರೆ. ಮಗಳು ತೃಿಶಾ ಸುಳ್ಯದ ಜೂನಿಯರ್ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದು ಪಾಸಾಗಿದ್ದಾರೆ.
25 ವರ್ಷದ ಹಿಂದೆ ಗೀತಾ ಅವರ ಹೈಸ್ಕೂಲ್ ವಿದ್ಯಾಭ್ಯಾಸ ಮೊಟಕುಗೊಂಡಿತ್ತು. ಎರಡು ವರ್ಷಗಳ ಹಿಂದೆ ಇವರು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಉತ್ತೀರ್ಣಗೊಂಡಿದ್ದರು. ಈ ವರ್ಷ ಪಿಯುಸಿ ಪರೀಕ್ಷೆಯನ್ನು ಸುಳ್ಯದ ಜೂನಿಯರ್ ಕಾಲೇಜಿನಲ್ಲಿ ಬರೆದಿದ್ದಾರೆ.
ಗೃಹ ರಕ್ಷಕ ದಳದ ಸಿಬ್ಬಂದಿಯಾಗಿರುವ ಇವರು ಕರ್ತವ್ಯದ ನಡುವೆ, ಮನೆಗೆಲಸದ ಬಿಡುವಿನ ವೇಳೆ ಓದಿನ ಅಭ್ಯಾಸವನ್ನು ರೂಢಿಸಿಕೊಂಡವರು. ಇವರ ಕಲಿಕೆಗೆ ಪೂರಕವಾಗಿ ಕಾಲೇಜಿನ ಉಪನ್ಯಾಸಕರೂ ಪುಸ್ತಕಗಳನ್ನು ನೀಡಿ ಸಹಕರಿಸಿದ್ದಾರೆ. ಇಧಿಗ ಪರೀಕ್ಷೆಯಲ್ಲಿ ಉತ್ತೀರ್ಣರಾದ ಖುಷಿಯಲ್ಲಿರುವ ಗೀತಾ, ತಮಗೆ ಸಹಕರಿಸಿದ ಪ್ರಾಧ್ಯಾಪಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.