ಬೆಂಗಳೂರು: ವಿದೇಶಗಳಲ್ಲಷ್ಟೇ ಅಲ್ಲ, ಕರ್ನಾಟಕದಲ್ಲೂ ಎವರೆಸ್ಟ್ ಬ್ರಾಂಡ್ ಮಸಾಲೆ ವಿವಾದ ಸೃಷ್ಟಿಸಿದೆ. ಹಾನಿಕಾರಕ ಅಂಶ ಹೊಂದಿರುವ ಹಿನ್ನೆಲೆಯಲ್ಲಿ ಎವರೆಸ್ಟ್ ಬ್ರಾಂಡ್ ಚಿಕನ್ ಮಸಾಲೆ ಬಳಸದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಕಲಬೆರಕೆ ವಿರುದ್ದ ಕಾನೂನು ಪ್ರಹಾರ ಮಾಡಲು ಅದಾಗಲೇ ನಿಯಮಗಳು ಇದ್ದರೂ ಭ್ರಷ್ಟ ಅಧಿಕಾರಿಗಳ ಮಿರ್ಲಕ್ಷ್ಯದಿಂದಾಗಿ ಮಾರುಕಟ್ಟೆಗಳಲ್ಲಿ ಕಳಪೆ ಪದಾರ್ಥಗಳು ಸಮಾನ್ಯವಾಗಿಬಿಟ್ಟಿದೆ. ಚೈನಾ ಸಾಲ್ಟ್ (ಟೇಸ್ಟಿಂಗ್ ಪೌಡರ್) ನಿಷೇಧ ಇದ್ದರೂ ಬಹುತೇಕ ಕಡೆ ಫಾಸ್ಟ್ ಫುಟ್‌ಗಳಲ್ಲಿ ಬಳಕೆಯಾಗುತ್ತಿದ್ದರೂ ಆಹಾರ ಇಲಾಖೆ ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂಬ ಆಕ್ರೋಶ ಸಾರ್ವಜನಿಕರದ್ದು. ಅಷ್ಟೇ ಅಲ್ಲ, ಕೃತಕ ಬಣ್ಣದ ಹಾವಳಿ ಬಗ್ಗೆಯೂ ಅಧಿಕಾರಿಗಳು ಗಮನಹರಿಸಿಲ್ಲ ಎಂಬುದು ಸಾರ್ವಜನಿಕರ ಆರೋಪ.
ಇವಿಷ್ಟೇ ಅಲ್ಲ, ರಿಫೈನ್‌ಡ್ ಅಡುಗೆ ಎಣ್ಣೆ ಕೂಡಾ ಕಲಬೆರಕೆಯಿಂದ ಕೂಡಿದ್ದು ಕ್ಯಾನ್ಸರ್ ಕಾರಕ ಅಂಶಗಳಿರುವ ಹಿನ್ನೆಲೆಯಲ್ಲಿ ಅಂತಹಾ ಅಡುಗೆ ಎಣ್ಣೆ ಬಳಸದಂತೆ ಆರೋಗ್ಯ ತಜ್ಞರು ಸಲಹೆ ನೀಡುತ್ತಲೇ ಇದ್ದಾರೆ. ಆದರೆ ಮಾರುಕಟ್ಟೆಗಳಲ್ಲಿರುವ ಅಡುಗೆ ಎಣ್ಣೆ ಎಷ್ಟು ಸೇಫ್ ಎಂಬ ಬಗ್ಗೆ ಅಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ ಎಂಬ ಆರೋಪವೂ ಪ್ರತಿಧ್ವನಿಸುತ್ತಿವೆ.
‘ಎವರೆಸ್ಟ್’ ಮೇಲೆ ಅಧಿಕಾರಿಗಳ ಸವಾರಿ:
ದೇಶ ವಿದೇಶಗಳಲ್ಲಿ ಜನಪ್ರಿಯವಾಗಿರುವ ಎವರೆಸ್ಟ್ ಕಾಂಪನಿಯ ಮಸಾಲೆ ಉತ್ಪನ್ನಗಳಲ್ಲಿ ಹಾನಿಕಾರಕ ಅಂಶಗಳಿವೆ ಎಂಬ ಸಂಗತಿ ಇದೀಗ ಬಯಲಾಗಿದೆ. ಈ ಹಿನ್ನೆಲೆಯಲ್ಲಿ ಹಲವು ದೇಶಗಳಲ್ಲಿ ಎವರೆಸ್ಟ್ ಕಂಪನಿಯ ಮಸಾಲೆಗಳನ್ನು ನಿಷೇಧಿಸಲಾಗಿದೆ.
ಇತ್ತ ಕರ್ನಾಟಕದಲ್ಲೂ ಮನೆಮಾತಾಗಿರುವ ಎವರೆಸ್ಟ್ ಉತ್ಪನ್ನದಿಂದ ದೂರ ಇರುವಂತೆ ಅಧಿಕಾರಿಗಳು ಸೂಚಿಸುದ್ದಾರೆಂಬ ಸುದ್ದಿ ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಗಿದೆ.
ಎವರೆಸ್ಟ್ ಚಿಕನ್ ಮಸಾಲಾದಲ್ಲಿ ಎಥಿಲಿನ್ ಆಕ್ಸೈಡ್ ಪ್ರಮಾಣ ಹೆಚ್ಚಾಗಿರುವುದರಿಂದ ಇದನ್ನು ಬಳಸದಂತೆ ಅಧಿಕಾರಿಗಳಿಂದ ಉತ್ತರ ಕನ್ನಡ ಜಿಲ್ಲೆಯ ಆಹಾರ ಸುರಕ್ಷತಾ ಅಧಿಕಾರಿಳು ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ. ಮೆಣಸಿನ ಪುಡಿಗೆ ಬಳಸುವ ಕೀಟನಾಶಕ ಎಥಿಲಿನ್ ಆಕ್ಸೈಡ್ ಪ್ರಮಾಣ ಎವರೆಸ್ಟ್ ಚಿಕನ್ ಮಸಾಲಾದಲ್ಲಿ ಹೆಚ್ಚಾಗಿದೆ ಎಂಬುದು ಅಧಿಕಾರಿಗಳ ವಾದ. ಎಥಿಲಿನ್ ಆಕ್ಸೈಡ್ ಬಳಕೆ ಹಾನಿಕಾರಕ. ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಆಹಾರ ಸುರಕ್ಷತಾ ಅಧಿಕಾರಿ ರಾಜಶೇಖರ್ ಅವರ ಅಭಿಪ್ರಾಯ.
ಅಡುಗೆ ಎಣ್ಣೆ ಸಹಿತ ಇತರ ಪದಾರ್ಥಗಳನ್ನೂ ಪರೀಕ್ಷೆ ಮಾಡಿ; ಸರ್ಕಾರಕ್ಕೆ ಆಗ್ರಹ:
ಎವರೆಸ್ಟ್ ವಿಚಾರದಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಧಿಕಾರಿಗಳು ದಿಟ್ಟ ಕ್ರಮಕ್ಕೆ ಮುನ್ನುಡಿ ಬರೆದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ‘ಎವರೆಸ್ಟ್’ ಮಾದರಿಯಲ್ಲೇ ಅಡುಗೆ ಎಣ್ಣೆ, ತುಪ್ಪ, ವಿಟಮಿನ್ ಡ್ರಿಂಕ್, ತಂಪು ಪಾನೀಯ, ಬೆಲ್ಲ, ಸಕ್ಕರೆ, ಸಾಂಬಾರ ಪದಾರ್ಥಗಳ ಬಗ್ಗೆಯೂ ಪರಿಶೀಲನೆ, ಪರೀಕ್ಷೆ ನಡೆಸಿ ಕಲಬೆರಕೆ ಹಾವಳಿಯನ್ನು ಸರ್ಕಾರ ತಡೆಯಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.