ರಾಮನಗರ : ರಾಮನಗರ ಜಿಲ್ಲೆಯ ಬಿಡದಿ ಪಟ್ಟಣದ ಬಳಿಯ ಟೊಯೋಟಾ ಕಾರ್ಖಾನೆಯ ಸ್ನಾನಗೃಹದ ಗೋಡೆಗಳ ಮೇಲಿನಪಾಕಿಸ್ತಾನ ಪರವಾದ ಬರಹಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು 24 ವರ್ಷದ ಹೈಮದ್ ಹುಸೇನ್ ಮತ್ತು 20 ವರ್ಷದ ಸಾದಿಕ್ ಎಂದು ಗುರುತಿಸಲಾಗಿದೆ, ಇಬ್ಬರೂ ಟೊಯೋಟಾ ಬೊಶೋಕು ಆಟೋಮೋಟಿವ್ ಇಂಡಿಯಾ ಕಂಪನಿ ಕಾರ್ಖಾನೆಯ ಗುತ್ತಿಗೆ ಕಾರ್ಮಿಕರಾಗಿದ್ದು ಅವರು ಉತ್ತರ ಕರ್ನಾಟಕ ಮೂಲದವರೆನ್ನಲಾಗಿದೆ.
ಹಸಿರು ಬಣ್ಣವನ್ನು ಬಳಸಿ ಕನ್ನಡದಲ್ಲಿ ಬರೆಯಲಾದ ಈ ಬರಹದಲ್ಲಿ ‘ಪಾಕಿಸ್ತಾನಕ್ಕೆ ವಿಜಯ’ ಮುಂತಾದ ಪಾಕಿಸ್ತಾನ ಪರ ಘೋಷಣೆಗಳು ಮತ್ತು ಕರ್ನಾಟಕದ ಜನರ ವಿರುದ್ಧ ಅವಹೇಳನಕಾರಿ ಹೇಳಿಕೆಗಳಿವೆ.
ಕಾರ್ಖಾನೆಯು ಮೂರು ಪಾಳಿಗಳಲ್ಲಿ ಕೆಲಸ ಮಾಡುವ 2,000 ಕ್ಕೂ ಹೆಚ್ಚು ಸಿಬ್ಬಂದಿಯನ್ನು ನೇಮಿಸಿಕೊಂಡಿದ್ದು, ಪ್ರತಿ ಪಾಳಿಯಲ್ಲಿ 600 ಕ್ಕೂ ಹೆಚ್ಚು ಉದ್ಯೋಗಿಗಳು ಇದ್ದಾರೆ. ಮಾರ್ಚ್ 16 ರಂದು ಮೊದಲ ಪಾಳಿಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಈ ವಿಷಯ ಬಹಿರಂಗವಾಗುತ್ತಿದ್ದಂತೆಯೇ ಭಾರೀ ಸಂಖ್ಯೆಯಲ್ಲಿ ಕನ್ನಡ ಕಾರ್ಯಕರ್ತರು ಕಾರ್ಖಾನೆ ಮುಂದೆ ಜಮಾಯಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಕಳೆದ ವರ್ಷವೂ ಇದೇ ರೀತಿಯ ಘಟನೆಯನ್ನು ಮುಚ್ಚಿಹಾಕಲಾಗಿತ್ತು ಎಂದು ಅವರು ಆರೋಪಿಸಿದರು. ಅಪರಾಧಿಗಳನ್ನು ವಜಾಗೊಳಿಸಿ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.
ಇದೇ ವೇಳೆ, ಕಂಪನಿಯು ಅಂತಹ ಕ್ರಮಗಳನ್ನು ಕಾನೂನಿನಡಿಯಲ್ಲಿ ದೇಶದ್ರೋಹದ ಕೃತ್ಯವೆಂದು ಪರಿಗಣಿಸಲಾಗುವುದು ಎಂದು ಸುತ್ತೋಲೆ ಹೊರಡಿಸಿತು. ಬರಹವು ಉದ್ಯೋಗಿಗಳಲ್ಲಿ ವಿಭಜನೆಯನ್ನು ಉಂಟುಮಾಡಬಹುದು ಮತ್ತು ಅಶಿಸ್ತಿಗೆ ಕಾರಣವಾಗಬಹುದು ಎಂದು ಅದು ಹೇಳಿತು. ತಪ್ಪಿಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕಂಪನಿ ಭರವಸೆ ನೀಡಿದೆ.
ಕಂಪನಿಯ ಮಾನವ ಸಂಪನ್ಮೂಲ ಇಲಾಖೆಯ ದೂರಿನ ಹಿನ್ನೆಲೆಯಲ್ಲಿ ಬಿಡದಿ ಪೊಲೀಸರು ಹೈಮದ್ ಹುಸೇನ್ ಮತ್ತು ಸಾದಿಕ್ ವಿರುದ್ಧ ಐಟಿ ಕಾಯ್ದೆಯ ಸೆಕ್ಷನ್ 67 ಮತ್ತು ಬಿಎನ್‌ಎಸ್ ಕಾಯ್ದೆಯ ಸೆಕ್ಷನ್ 193 ಮತ್ತು 356 ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.