ಬೆಂಗಳೂರು: ಪ್ರಜ್ವಲ್ ರೇವಣ್ಣ ಪ್ರಕರಣದಿಂದಾಗಿ ಇಡೀ ದೇಶದಲ್ಲಿ ರಾಜ್ಯದ ಮಾನ ಹರಾಜಾಗುತ್ತಿದ್ದರೂ ಬಿಜೆಪಿ ನಾಯಕರು ಏನೂ ನಡೆದಿಲ್ಲ ಎಂಬಂತಿದ್ದಾರೆ ಎಂದಿರುವ ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು, ಬೇಟಿ ಬಚಾವೋ, ಪಡಾವೋ ಎಂದು ಹೇಳುವ ಪ್ರಧಾನಿ ಮೋದಿಯವರಿಗೂ ಈ ಪ್ರಕಣದಲ್ಲಿ ಕಿವುಡುತನ ಬಂದಿದೆ. ಎರಡು ದಿನ ಕರ್ನಾಟಕದಲ್ಲಿ ಇದ್ದರೂ ಸಹ ಏಕೆ ತುಟಿ ಬಿಚ್ಚಿಲ್ಲ ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ಸಿಗರನ್ನು ಹುಡುಕಾಡಿ ನೊಟೀಸ್ ನೀಡುವ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರು ಪ್ರಜ್ವಲ್ ಪ್ರಕರಣದಲ್ಲಿ ಮೌನವೇಕೆ ಎಂದೂ ರಮೇಶ್ ಬಾಬು ಪ್ರಶ್ನೆ ಮಾಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಶಾಸಕರೂ ಆದ ರಮೇಶ್ ಬಾಬು, NDA ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ಪುರಾಣದ ಇತಿಹಾಸವನ್ನೇ ತೆರೆದಿಟ್ಟು ಬಿಜೆಪಿ ನಾಯಕರನ್ನು ಮೊಣಚು ಮಾತುಗಳಿಂದ ತಿವಿದರು. ಕರ್ನಾಟಕದ ಸಂಸ್ಕೃತಿ, ರಾಜಕಾರಣಕ್ಕೆ ಮಸಿ ಬಳಿಯುವಂತಹ ಲೈಂಗಿಕ ಶೋಷಣೆಯ ಘಟನೆ ನಡೆದಿದ್ದು ನಾಗರಿಕ ಸಮಾಜ ತಲೆತಗ್ಗಿಸುವ ಸಂಗತಿ ಇದಾಗಿದೆ. ಹಾಲಿ ಸಂಸದ ಹಾಗೂ NDA ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮೇಲೆ ಲೈಂಗಿಕ ಶೋಷಣೆಯ ಆರೋಪ ಬಂದಿದೆ. ಕೇವಲ ಇವರ ಮೇಲೆ ಮಾತ್ರ ಆರೋಪ ಬಂದಿಲ್ಲ. ಇಡೀ ಕುಟುಂಬದ ಮೇಲೆ ಆರೋಪ ಬಂದಿದ್ದು, ಅವರ ತಂದೆಯ ಮೇಲೆಯೂ ದೂರು ದಾಖಲಾಗಿದೆ ಎಂದು ಲೇವಡಿ ಮಾಡಿದರು.
ಸತ್ಯಹರಿಶ್ಚಂದ್ರನ ಮನೆಯವರಂತೆ ಬಿಜೆಪಿಯವರು ಕಳೆದ 10 ವರ್ಷಗಳಿಂದ ತಮ್ಮನ್ನು ತಾವು ಬಿಂಬಿಸಿಕೊಂಡಿದ್ದರು. ಮಾಡೋದು ಅನಾಚಾರ ಮನೆ ಮುಂದೆ ಬೃಂದಾವನ ಎನ್ನುವಂತೆ ಈ ಘಟನೆ ಬಗ್ಗೆ ಬಿಜೆಪಿಯವರು ಚಕಾರ ಎತ್ತುತ್ತಿಲ್ಲ. ಈ ದೇಶದ ಜನಕ್ಕೆ, ಮಹಿಳೆಯರಿಗೆ ಉತ್ತರ ನೀಡದೆ ತಲೆಮರೆಸಿಕೊಂಡಿದ್ದಾರೆ. ಮೋದಿ, ನಡ್ಡಾ ಅಮಿತ್ ಶಾ ಸೇರಿದಂತೆ ಇತರೇ ನಾಯಕರು ಪಲಾಯನವಾದ ಮಾಡಿದ್ದಾರೆ ಎಂದು ದೂರಿದ ರಮೇಶ್ ಬಾಬು, ಹೊಳೆನರಸಿಪುರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದ ದೇವರಾಜೇಗೌಡ ಅವರು ರಾಷ್ಟ್ರೀಯ ಹಾಗೂ ರಾಜ್ಯ ನಾಯಕರಿಗೆ ಪತ್ರವನ್ನು ಬರೆದು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಬೇಡಿ ಮಾಡಿಕೊಂಡರು ಈ ಕುಟುಂಬದ ಸದಸ್ಯರಿಗೆ ಟಿಕೆಟ್ ಕೊಡಬೇಡಿ ಏಕೆಂದರೆ ಲೈಂಗಿಕ ಹಗರಣದ ಆರೋಪ ಇವರುಗಳ ಮೇಲಿದೆ ಎಂದು ಗನಮಕ್ಕೆ ತಂದಿದ್ದರು ಎಂಬ ಸಂಗತಿಯನ್ನು ಬಹಿರಂಗಪಡಿಸಿದರು.
ದೇವರಾಜೇಗೌಡ ಎನ್ನುವ ವ್ಯಕ್ತಿ ಕುಮಾರಸ್ವಾಮಿ ಅವರ ಜೊತೆ ಇದೇ ಲೈಂಗಿಕ ಹಗರಣದ ವಿಡಿಯೋಗಳ ಕುರಿತು ಚರ್ಚೆ ನಡೆಸಿದ್ದಾರೆ. ಈ ವಿಚಾರ ಕುಮಾರಸ್ವಾಮಿ ಅವರ ಮೂಲಕ ದೇವೇಗೌಡರ ಗಮನಕ್ಕೂ ಬಂದಿದೆ. ಬಿಜೆಪಿ ಸೇರಿದಂತೆ ಜೆಡಿಎಸ್ ಪಕ್ಷದ ಎಲ್ಲಾ ನಾಯಕರಿಗೆ ಮಾಹಿತಿ ಇದ್ದರೂ ಟಿಕೆಟ್ ನೀಡಿದ್ದು ಏಕೆ ಎಂದು ರಮೇಶ್ ಬಾಬು ಪ್ರಶ್ನಿಸಿದರು.
ಇದೀಗ ಬೀದಿ, ಬೀದಿಗಳಲ್ಲಿ ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡುವ ಪರಿಸ್ಥಿತಿ ಉದ್ಬವವಾಗಿದೆ. ಇದಕ್ಕೆ ಬಿಜೆಪಿ, ಜೆಡಿಎಸ್ ನಾಯಕರು ಏಕೆ ಉತ್ತರ ಕೊಡುತ್ತಿಲ್ಲ. ಕಳೆದ 15 ದಿನಗಳ ಹಿಂದೆ ಹಾಸನದ ಮಾಜಿ ಶಾಸಕ ಪ್ರೀತಂ ಗೌಡ ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದರು. ಎಲ್ಲರಿಗೆ ವಿಚಾರ ಗೊತ್ತಿದ್ದರೂ ಏಕೆ ಬಹಿರಂಗ ಮಾಡಲಿಲ್ಲ. ಈಗ ಕುಮಾರಸ್ವಾಮಿ ಅವರು ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ಇದು ಅವರ ಕುಟುಂಬದ ವಿಚಾರ, ಪಕ್ಷದ ನಾಯಕನ ವಿಚಾರ ಇದಕ್ಕೆ ಉತ್ತರ ನೀಡುವುದು ಸಹ ಅವರ ಜವಾಬ್ದಾರಿಯಾಗಿದೆ ಎಂದು ಪ್ರತಿಪಾದಿಸಿದರು.
ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಮಾನ ಹರಾಜಾಗುತ್ತಿದೆ. ಶೋಷಿತ ಹಾಗು ದುರ್ಬಲ ವರ್ಗದ ಹೆಣ್ಣು ಮಕ್ಕಳ ಮಾನ ಹರಾಜಾಗುತ್ತಿದೆ. ಕುಮಾರಸ್ವಾಮಿ ಅವರೇ ನಿಮಗೆ ಉತ್ತರ ಕೊಡುವ ಶಕ್ತಿ ಇಲ್ಲದಿದ್ದರೇ ಈ ಪ್ರಕರಣ ಯಾವಾಗ ಗಮನಕ್ಕೆ ಬಂದಿತು ಎಂದು ತಿಳಿಸಿ. ದೇವರಾಜೇಗೌಡ, ಪ್ರೀತಂ ಗೌಡ ಅವರು ಯಾವಾಗ ಭೇಟಿ ಮಾಡಿದ್ದರು ತಿಳಿಸಿ. ಪ್ರಕರಣದ ಬಗ್ಗೆ ಅವರಿಗೆ ಗೊತ್ತಿದ್ದರೂ ಮುಚ್ಚಿಟ್ಟಿರುವುದು ಅಪರಾಧ. ಸತ್ಯವನ್ನು ಹೇಳಿ ಕುಮಾರಸ್ವಾಮಿ ಅವರೇ? ಎಂದು ತರಾಟೆಗೆ ತೆಗೆದುಕೊಂಡ ರಮೇಶ್ ಬಾಬು, ಲೋಕಸಭಾ ಸ್ಪೀಕರ್ ಅವರು ಕ್ಷುಲ್ಲಕ ಕಾರಣಗಳಿಗಾಗಿ ವಿರೋಧ ಪಕ್ಷಗಳ ಸಂಸದರನ್ನು ಅಮಾನತು ಮಾಡಿದ್ದರು. ಆದರೆ ಈ ಪ್ರಕರಣದಲ್ಲಿ ಏಕೆ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
ಹೆಣ್ಣು ಮಕ್ಕಳ ಬಗ್ಗೆ ಸಾಕಷ್ಟು ಗೌರವ ಹೊಂದಿರುವ ಬೇಟಿ ಬಚಾವೋ, ಪಡಾವೋ ಎಂದು ಹೇಳುವ ಪ್ರಧಾನಿಗಳು ಈ ಪ್ರಕಣದಲ್ಲಿ ಕಿವುಡುತನ ಬಂದಿದೆ. ಎರಡು ದಿನ ಕರ್ನಾಟಕದಲ್ಲಿ ಇದ್ದರೂ ಸಹ ಏಕೆ ಮಾತನಾಡಿಲ್ಲ. ಪ್ರಧಾನಿಗಳು ಸಹ ಪ್ರಜ್ವಲ್ ಅವರನ್ನು ರಕ್ಷಣೆ ಮಾಡುವ ಇರಾದೆ ಹೊಂದಿದ್ದಾರೆಯೇ? ಮೋದಿ ಅವರು ಯಾವುದೇ ಕಾರಣಕ್ಕೂ ಆರೋಪಿಯನ್ನು ರಕ್ಷಣೆ ಮಾಡುವ ಕೆಲಸ ಮಾಡಬಾರದು. ಈ ಹಗರಣ ಹೊರಗೆ ಬಂದ ನಂತರ ಬಿಜೆಪಿ ಮೈತ್ರಿ ಅಭ್ಯರ್ಥಿ ದೇಶ ಬಿಟ್ಟು ಹೋಗಿದ್ದಾರೆ. ಆರೋಪಿಯನ್ನು ರಕ್ಷಿಸುವುದು ಪ್ರಧಾನಿ ಹುದ್ದೆಗೆ ಘನತೆ ತರುವುದಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ನಾಯಕರನ್ನು ಹುಡುಕಾಡಿ ನೊಟೀಸ್ ನೀಡುವ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರು ಪ್ರಜ್ವಲ್ ಪ್ರಕರಣದಲ್ಲಿ ಮೌನವೇಕೆ? ರಮೇಶ್ ಬಾಬು ಪ್ರಶ್ನೆ ಮಾಡಿದರು. ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರು ಕಾಂಗ್ರೆಸ್ ಪಕ್ಷದ ನಾಯಕರನ್ನು ಹುಡುಕಿ ನೋಟಿಸ್ ನೀಡುತ್ತಾರೆ. ಆದರೆ ಇವರು ತಮ್ಮ ದೋಸ್ತಿ ಪಕ್ಷದ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಕೂಡಲೇ ಆಯೋಗ ಮದ್ಯ ಪ್ರವೇಶ ಮಾಡಿ ಯಾರು, ಯಾರು ಭಾಗಿಯಾಗಿದ್ದಾರೆ ಅವರಿಗೆ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದರು.