ಬೆಂಗಳೂರು: ರಾಜ್ಯದಲ್ಲಿ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದರೂ, ಬಿಜೆಪಿ ವಿರುದ್ದದ ಅಲೆ ಇದ್ದರೂ ಲೋಕಸಭಾ ಚುನಾವಣೆಯಲ್ಲಿ ಬಹುತೇಕ ಕಡೆ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದೆ. ಹಲವಾರು ಕಡೆ ಸಚಿವರ ನಿರ್ಲಕ್ಷ್ಯದಿಂದಾಗಿ ಬಿಜೆಪಿಗೆ ವರದಾನವಾಗಿದೆ ಎಂಬ ಆಕ್ರೋಶವೂ ಕಾಂಗ್ರೆಸ್ ಕಾರ್ಯಕರ್ತರಲ್ಲಿ ವ್ಯಕ್ತವಾಗಿದೆ.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಲೀಡ್ ಕೊಡಿಸದ ಸಚಿವರ ತಲೆದಂಡಕ್ಕೆ ಆಗ್ರಹ ಕೇಳಿಬಂದಿದೆ. ಈ ವಿಚಾರದಲ್ಲಿ ಚನ್ನಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸವರಾಜ್ ವಿ. ಶಿವಗಂಗಾ ಅವರ ಹೇಳಿಕೆ ಕಾಂಗ್ರೆಸ್ ಪಾಳಯದಲ್ಲಿ ಸಂಚಲನ ಸೃಷ್ಟಿಸಿದೆ.
ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ ಅರ್ಧಕ್ಕೂ ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್ ಪಕ್ಷ ಗೆಲ್ಲುವ ವಿಶ್ವಾಸ ಸಿಎಂ-ಡಿಸಿಎಂಗೆ ಇತ್ತು. ಅಷ್ಟು ಕ್ಷೇತ್ರಗಳನ್ನು ಗೆಲ್ಲಿಸುವುದಾಗಿ ಸಿಎಂ-ಡಿಸಿಎಂ ಅವರು ಕಾಂಗ್ರೆಸ್ ಹೈಕಮಾಂಡ್‌ಗೆ ಭರವಸೆ ನೀಡಿದ್ದಾರೆ. ಆದರೆ ಒಂದಂಕಿಯನ್ನೂ ದಾಟದೆ ರಾಜ್ಯದಲ್ಲಿ ಕಾಂಗ್ರೆಸ್ ಕಳಪೆ ಸಾಧನೆ ತೋರಿದೆ. ಈ ಬಗ್ಗೆ ರಾಹುಲ್ ಗಾಂಧಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಅದೇ ಹೊತ್ತಿಗೆ, ಕಳಪೆ ಸಾಧನೆಯ ಆರೋಪಕ್ಕೆ ಗುರಿಯಾಗಿರುವ ದಿನೇಶ್ ಗುಂಡೂರಾವ್, ಲಕ್ಷ್ಮೀ ಹೆಬ್ಬಾಳ್ಕರ್ ಸಹಿತ ಜಿಲ್ಲಾ ಉಸ್ತುವಾರಿ ಸಚಿವರ ರಾಜೀನಾಮೆಗೆ ಆಗ್ರಹ ಕೇಳಿಬಂತು.
#KARAVALI (Coastal) KARNATAKA POSTMORTEM:
📌There should be a big change in the structural organization & the functioning Style of the Congress in Coastal Karnataka.!!
🎯WHAT SHOULD BE DONE.?
🟩🟨CONGRESS HIGHCOMMAND MUST FIX THE ACCOUNTABILITY:
◾FIRST, SACK Incharge… pic.twitter.com/t573hHqO4e
— Gururaj Anjan (@Anjan94150697) June 6, 2024
ಕರಾವಳಿಯ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹೀನಾಯ ಸೋಲಿಗೆ ಉಸ್ತುವಾರಿ ಸಚಿವರೇ ಹೊಣೆಗಾರರು ಎಂದು ಪಕ್ಷದ ನಾಯಕರು ಬೊಟ್ಟು ಮಾಡಿದ್ದಾರೆ.
ಇದೀಗ, ಚನ್ನಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸವರಾಜ್ ವಿ. ಶಿವಗಂಗಾ ಅವರ ಹೇಳಿಕೆಗೂ ಮಹತ್ವ ಬಂದಿದೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಯಾವ ಸಚಿವರು ತಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆ ಲೀಡ್ ಕಡಿಮೆ ಕೊಡಿಸಿದ್ದಾರೋ ಅಂತವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ ಹೊಸಬರಿಗೆ ಅವಕಾಶ ಮಾಡಿಕೊಡುವಂತಾಗಬೇಕು ಎಂದು ಆಗ್ರಹಿಸಿದ್ದಾರೆ.
ತಮ್ಮ ಕ್ಷೇತ್ರ ದಲ್ಲಿ ಲೀಡ್ ಕೊಡಿಸಲು ಸಾಧ್ಯವಾಗದ ಸಚಿವರನ್ನು ಕೈಬಿಡಬೇಕು ಎಂದು ಕಾಂಗ್ರೆಸ್ ವರಿಷ್ಟರಾದ ರಾಹುಲ್ ಗಾಂಧಿ ಹಾಗೂ ಕೆಪಿಸಿಸಿ ನಾಯಕರಿಗೆ ಮನವಿ ಮಾಡಿದ್ದಾರೆ.
ಇಷ್ಟೊಂದು ಗ್ಯಾರೆಂಟಿ ಯೋಜನೆ ನೀಡಿದರೂ ಕೂಡ ರಾಜ್ಯದಲ್ಲಿ ಹೆಚ್ಚು ಸೀಟ್ ಬಂದಿಲ್ಲ ಎಂಬುದು ಬೇಸರದ ಸಂಗತಿ, ಹಾಗಾಗಿ ನಮಗೆ ಪಕ್ಷ ಮುಖ್ಯವೇ ಹೊರತು ವ್ಯಕ್ತಿ ಮುಖ್ಯವಲ್ಲ ಎಂಬುದನ್ನು ಈಗಲಾದರೂ ತೋರಿಸಿಕೊಡಬೇಕೆಂದು ಶಾಸಕರು ಪ್ರತಿಪಾದಿಸಿದ್ದಾರೆ.