ಬೆಂಗಳೂರು: ಕೆಲವೇ ಜಿಲ್ಲೆಗಳಿಗೆ ಸೀಮಿತವಾಗಿ ಅವಕಾಶವಾದಿ ರಾಜಕಾರಣಿಯಾಗಿ ರಾಜ್ಯದ ಮಾಜಿ ಮುಖ್ಯಮಂತ್ರಿಯಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರು “ಬಿಜೆಪಿಗೆ ರಾಜ್ಯದಲ್ಲಿ ಲೈಫ್ ಕೊಟ್ಟಿದ್ದು ನಾನೇ” ಎಂಬ ಹೇಳಿಕೆ ಅರ್ಥಹೀನ ಮತ್ತು ಹಾಸ್ಯಾಸ್ಪದ ಎಂದು ರಾಜ್ಯದ ಮುಖ್ಯ ವಕ್ತಾರರು ಮತ್ತು ವಿಧಾನಪರಿಷತ್ ಮಾಜಿ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಹೇಳಿದ್ದಾರೆ.
ರಾಜ್ಯಾದ್ಯಂತ ಪಕ್ಷ ಕಟ್ಟಿ ಬೆಳೆಸುವಲ್ಲಿ ವಿಫಲರಾಗಿರುವ ಮತ್ತು ರಾಜಕೀಯ ಅಸ್ತಿತ್ವ ಕಳೆದುಕೊಂಡು ಮೂಲೆಗುಂಪಾಗುತ್ತಿರುವ ಕುಮಾರಸ್ವಾಮಿಯವರ ಈ ಹೇಳಿಕೆ ಅವರ ಹತಾಶ ಮನೋಭಾವವನ್ನು ವ್ಯಕ್ತಪಡಿಸುತ್ತದೆ ಎಂದಿದ್ದಾರೆ.
2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ 104 ಶಾಸಕರು ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ 25ನ್ನು ಗೆದ್ದು ಭಾಜಪ ಅಭೂತಪೂರ್ವ ಜಯ ಸಾಧಿಸಿತ್ತು. ನಂತರ ನಡೆದ 15 ಕ್ಷೇತ್ರಗಳ ವಿಧಾನಸಭಾ ಉಪ ಚುನಾವಣೆಯಲ್ಲೂ 12 ಸ್ಥಾನಗಳನ್ನು ಪಕ್ಷ ಗೆದ್ದಿರುವುದು ಪಕ್ಷದ ಜನಪ್ರಿಯತೆಗೆ ಸಾಕ್ಷಿಯಾಗಿದೆ.
ಈಚೆಗೆ ನಡೆದ ಆರ್‍ಆರ್ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳ ಚುನಾವಣೆಗಳಲ್ಲಿ ಮತ್ತು ವಿಧಾನಪರಿಷತ್ತಿನ ನಾಲ್ಕೂ ಸ್ಥಾನಗಳನ್ನು ಪಕ್ಷ ಗೆದ್ದಿರುವುದು ಕುಮಾರಸ್ವಾಮಿ ಅವರನ್ನು ಆತಂಕಕ್ಕೆ ಗುರಿ ಮಾಡಿದೆ. ಗ್ರಾಮ ಪಂಚಾಯತ್‍ಗಳಲ್ಲಿ ಬಿಜೆಪಿ ಬೆಂಬಲಿತರ ಜಯಭೇರಿಯೂ ಕುಮಾರಸ್ವಾಮಿಯವರ ನಿದ್ದೆಗೆಡಿಸಿದೆ. ಬಿಜೆಪಿಯ ರಾಷ್ಟ್ರೀಯ ಚಿಂತನೆಗೆ ಜನರು ಮನ್ನಣೆ ನೀಡಿದ್ದು, ಕೇಂದ್ರ ಹಾಗೂ 17 ರಾಜ್ಯಗಳಲ್ಲಿ ಪಕ್ಷವು ಅಧಿಕಾರ ನಡೆಸುತ್ತಿರುವುದೇ ಇದಕ್ಕೆ ಸಾಕ್ಷಿ. ಪ್ರಾಯಶಃ ಕೇವಲ ಪ್ರಚಾರದ ದೃಷ್ಟಿಯಿಂದ ಕುಮಾರಸ್ವಾಮಿ ಅವರು ಈ ರೀತಿಯ ಹೇಳಿಕೆ ನೀಡಿರಬಹುದು ಎಂದು ತಿಳಿಸಿದ್ದಾರೆ.
ಕೇವಲ ಆರು ವರ್ಷಗಳಲ್ಲಿ ಕ್ರಾಂತಿಕಾರಿ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ದೂರದೃಷ್ಟಿಯ ಯೋಜನೆಗಳ ಮೂಲಕ ವಿಶ್ವದ ಅಗ್ರಮಾನ್ಯ ನಾಯಕರಾಗಿ ಹೊಮ್ಮಿರುವ ನಮ್ಮ ನೆಚ್ಚಿನ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಹಾಗೂ ಜನಪರ ಯೋಜನೆಗಳ ಮೂಲಕ ರಾಜ್ಯದ ಜನರ ಮನವನ್ನು ಗೆದ್ದಿರುವ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಡಳಿತವು ಭಾರತೀಯ ಜನತಾ ಪಾರ್ಟಿಯನ್ನು ರಾಜ್ಯದ ಮತ್ತು ರಾಷ್ಟ್ರದ ಜನಮಾನಸದಲ್ಲಿ ನೆಲೆಯೂರುವಂತೆ ಮಾಡಿದ್ದು, ಬದಲಾದ ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಯಲ್ಲಿ ಅಪ್ರಸ್ತುತರಾಗುತ್ತಿರುವ ಮುಖಂಡರುಗಳು ಹತಾಶರಾಗಿ ತಮ್ಮ ಅಸ್ತಿತ್ವಕ್ಕಾಗಿ ಈ ರೀತಿಯ ಬೇಜವಾಬ್ದಾರಿಯ ಹೇಳಿಕೆ ನೀಡುತ್ತಿರುವುದು ಖಂಡನೀಯ ಎಂದು ತಿಳಿಸಿದ್ದಾರೆ.