ಸ್ತ್ರೀಯರ ಮಾಸಿಕ ರಜೆ ಬಗ್ಗೆ ಕೇಂದ್ರ ಸರ್ಕಾರ ಸದ್ಯದಲ್ಲೇ ಸೂಕ್ತ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ. ಮಹಿಳೆಯರ ಮುಟ್ಟಿನ ರಜೆ ಸಂಬಂಧ ಸೂಕ್ತ ನಿರ್ಧಾರ ಕೈಗೊಳ್ಳುವ ಅಗತ್ಯವಿದೆ ಎಂಬ ಸಂಸದೀಯ ಸ್ಥಾಯಿ ಸಮಿತಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದು ಈ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳುವ ವಿಶ್ವಾಸವನ್ನು ಮಹಿಳಾ ನಾಯಕರು ವ್ಯಕ್ತಪಡಿಸಿದ್ದಾರೆ.
ವೈದ್ಯಕೀಯ ಪ್ರಮಾಣಪತ್ರಗಳ ಅಗತ್ಯವಿಲ್ಲದೇ, ಮಹಿಳೆಯರಿಗೆ ನಿರ್ದಿಷ್ಟ ಅವಧಿಯ ಮುಟ್ಟಿನ ರಜೆ ನೀಡಬೇಕು. ಅಥವಾ ಅಸ್ವಸ್ಥತೆಗೆ ನೀಡುವ ರಜೆ ವ್ಯವಸ್ಥೆ ಕಲ್ಪಿಸಬೇಕು, ಅರ್ಧ ಪಾವತಿ ರಜೆಯನ್ನು ಮಂಜೂರಾತಿ ಪ್ರಸ್ತಾಪಕ್ಕೂ ಅಸ್ತು ನೀಡಬೇಕು. ಈ ಸಂಬಂಧ ನೀತಿ ರೂಪಿಸಲು ಸಂಸದೀಯ ಸ್ಥಾಯಿ ಸಮಿತಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಬಿಜೆಪಿ ಸಂಸದ ಸುಶೀಲ್ ಕುಮಾರ್ ಮೋದಿ ನೇತೃತ್ವದ ಸಮಿತಿ ಇದಾಗಿದೆ. ತನ್ನ ಶಿಫಾರಸಿನಂತೆ ಕ್ರಮ ಜಾರಿಯಾದಲ್ಲಿ, ಈ ಸಂಬಂಧದ ನೀತಿಯಿಂದ ಸಂಘಟಿತ ವಲಯದಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚುತ್ತದೆ ಎಂದು ಸಮಿತಿ ಅಭಿಪ್ರಾಯ ಪಟ್ಟಿದೆ. ಮಹಿಳೆಯರ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು, ಅವರ ವಿಶೇಷ ಅಗತ್ಯಗಳನ್ನು ಪೂರೈಸುವ ದೃಷ್ಟಿಯಿಂದ ಸೂಕ್ತ ನೀತಿ ರೂಪಿಸುವ ಅಗತ್ಯವಿದೆ ಎಂದು ಶಿಫಾರಸಿನಲ್ಲಿ ಹೇಳಲಾಗಿದೆ ಎಂದು ಮೂಲಗಳು ತಿಳಿಸಿವೆ.