ಬೆಂಗಳೂರು: ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸಬೇಕೆಂದು ಒತ್ತಾಯಿಸಿ ಪಂಚಮಸಾಲಿ ಲಿಂಗಾಯತರು ನಡೆಸುತ್ತಿರುವ ಹೋರಾಟ ಸುದೀರ್ಘ 2 ತಿಂಗಳನ್ನು ಕ್ರಮಿಸಿದೆ. ಇದೀಗ 62ನೇ ದಿನವೂ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸತ್ಯಾಗ್ರಹ ಮುಂದುವರಿದಿದ್ದು ಹೋರಾಟಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಕೂಡಲಸಂಗಮದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಈ ಸತ್ಯಾಗ್ರಹ ನಡೆಯುತ್ತಿದ್ದು ವಿವಿಧ ಪಕ್ಷಗಳ ಮುಖಂಡರು ಈ ಹೋರಾಟ್ಲ್ಲಿ ಭಾಗಿಯಾಗಿದ್ದಾರೆ. ಆದರೆ ಸರ್ಕಾರ ಮಾತ್ರ ಈ ಹೋರಾಟ ಬಗ್ಗೆ ಕ್ಯಾರೇ ಅನ್ನುತ್ತಿಲ್ಲ. ಈ ಪ್ರಬಲ ಸಮುದಾಯವೇ ಕರ್ನಾಟಕದಲ್ಲಿ ರಾಜಕೀಯ ಪಕ್ಷಗಳಿಗೆ ಶಕ್ತಿಯಾಗಿದ್ದರೂ ಬೊಮ್ಮಾಯಿ ಸರ್ಕಾರ ಈ ಹೋರಾಟವನ್ನು ನಿರ್ಲಕ್ಷ್ಯ ತಾಳಿರುವುದು ಬಿಜೆಪಿಗೆ ಈ ಬಾರಿಯ ಚುನಾವಣೆ ಕಬ್ಬಿಣದ ಕಡಲೆಯಂತಾಗಲಿದೆ ಎಂಬುದು ರಾಜಕೀಯ ಪಂಡಿತರ ವಿಶ್ಲೇಷಣೆ.
ಈ ನಡುವೆ, ಬುಧವಾರದ ಹೋರಾಟ ಕುತೂಹಲದ ಕೇಂದ್ರಬಿಂದುವಾಯಿತು. ಮಾಜಿ ಸಂಸದ ಶಿವರಾಮೆಗೌಡ ನೇತೃತ್ವದಲ್ಲಿ ಗಂಗಾವತಿಯಿಂದ ಐದುನೂರು ಕ್ಕಿಂತ ಹೆಚ್ಚು ಜನರು ಭಾಗಿಯಾದರು. ಕಲ್ಯಾಣ ರಾಜ್ಯ ಪ್ರಗತಿ ಪಕ್ಕದ ಜನಾರ್ಧನ ರೆಡ್ಡಿ ಹಾಗೂ ಶಾಸಕ ಪರಣ್ಣ ಮುನವಲ್ಲಿ, ಮಾಜಿ ಶಾಸಕ ಮೋಹನ್ ಲಿಂಬಿಕಾಯಿ ಸಹಿತ ಪ್ರಮುಖರನೇಕರು ಭಾಗಿಯಾಗಿ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿಗೆ ಶಕ್ತಿಯಾದರು.
ಎರಡು ತಿಂಗಳ ಹೋರಾಟದ ನಡುವೆ, ಬುಧವಾರ ಪ್ರಮುಖ ಘೋಷಣೆ ಮಾಡಿರುವ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಮೀಸಲಾತಿ ಸಿಗುವವರೆಗೂ ಸರ್ಕಾರದಲ್ಲಿ ಅಧಿಕಾರದಲ್ಲಿ ಇರುವವರೆಗೂ ಪಂಚಮಸಾಲಿ ಸತ್ಯಾಗ್ರಹ ಮುಂದುವರೆಸುತ್ತೆವೆ ಎಂದು ಘೋಷಿಸಿದ್ದಾರೆ.
ಬೆಂಗಳೂರಿನ ಸ್ವಾತಂತ್ರ ಉದ್ಯಾನವನದಲ್ಲಿನ ಸತ್ಯಾಗ್ರಹದ ಅಖಾಡದಲ್ಲೇ ಮಾಧ್ಯಮ ಗೊಷ್ಠಿ ನಡೆಸಿದ ಪಂಚಮಸಾಲಿ ಲಿಂಗಾಯತ ಸಮುದಾಯದ ಪ್ರಥಮ ಜಗದ್ಗುರುಗಳೂ ಆದ ಅವರು, ಪಂಚಮಸಾಲಿ ಮೀಸಲಾತಿ ಬಗ್ಗೆ ಮಾರ್ಚ್ 15 ರವರಗೆ ಸರ್ಕಾರಕ್ಕೆ ಕಲಾವಕಾಶ ನೀಡಲಾಗಿತ್ತು. ಅದರೆ ಇದುವರೆಗೂ ಸಿಎಂ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪನವರು ನಮ್ಮ ಹೋರಾಟಕ್ಕೆ ಸ್ಪಂದಿಸಿಲ್ಲ. ನಮ್ಮ ನಾಯಕರೊಂದಿಗೆ ಈ ಬಗ್ಗೆ ಚರ್ಚೆಯು ಮಾಡಿಲ್ಲ. ಎಂದು ಆಕ್ರೋಶ ಹೊರಹಾಕಿದರು.
ಲಿಂಗಾಯತ ನಾಯಕರೆಂದು ತಿಳಿದುಕೊಂಡು ನಮ್ಮ ಸಮಾಜ ಇಪ್ಪತ್ತು ವರ್ಷಗಳ ಕಾಲ ಯಡಿಯೂರಪ್ಪನವರನ್ನು ನಂಬಿ ಮತವನ್ನು ಹಾಕಿದೆ. ಅದರೆ ಲಿಂಗಾಯತ ಸಮಾಜದಲ್ಲಿಯೇ ಅತ್ಯಂತ ಬಹು ದೊಡ್ಡ ಸಮಾಜವಾಗಿರುವ ಪಂಚಮಸಾಲಿಗಳು ಬೀದಿಯಲ್ಲಿ ನಿಂತು ಸತ್ಯಾಗ್ರಹ ಮಾಡುತ್ತಿದ್ದರೂ ಸರ್ಕಾರ ಸ್ಪಂದಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಲಿಂಗಾಯತ ಸಿಎಂ ಬೊಮ್ಮಾಯಿ ಅವರು ನಮ್ಮಿಂದ ಮತ ಭಿಕ್ಷೆ ಬೇಡಿ ಅಧಿಕಾರದಲ್ಲಿದ್ದಾರೆ, ನಮ್ಮನ್ನು ನಡು ರಸ್ತೆಯಲ್ಲಿ ಕೈ ಬಿಟ್ಟು ಸಮುದಾಯವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದ ಶ್ರೀಗಳು, ಇವರನ್ನು ಹೇಗೆ ಲಿಂಗಾಯತ ನಾಯಕ ಎಂದು ಒಪ್ಪಲು ಸಾಧ್ಯ ಎಂದರು. ಇನ್ನು ಮುಂದೆ ಒಪ್ಪಲು ಸಮಾಜದವರಿಗೆ ಸಾಧ್ಯವಿಲ್ಲ. ಆದ್ದರಿಂದ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ರವರು ಇವರನ್ನು ನಂಬಿ ಚುನಾವಣೆಗೆ ಹೋದರೆ ನಿಮ್ಮ ಗುರಿ ಮುಟ್ಟಲು ಸಾಧ್ಯವಿಲ್ಲ ಎಂದರು. ಇವರು ಮೀಸಲಾತಿಗೆ ಮಾಡಿದ ಮೊಸದಿಂದ ನಮ್ಮ ಸಮಾಜದವರು ಅಸಮಾಧಾನಗೊಂಡಿದ್ದಾರೆ ಎಂದು ಶ್ರೀಗಳು ನುಡಿದರು.
ಶ್ರೀಗಳಿಂದ ಸರ್ಕಾರಕ್ಕೆ ಸಂದೇಶ:
-
ಸರ್ಕಾರ ಅಧಿಕಾರದಲ್ಲಿ ಇರುವವರೆಗೂ , ನಮ್ಮ ಸತ್ಯಾಗ್ರಹವನ್ನು ಮುಂದುವರೆಸುತ್ತೆವೆ.
-
ಬರುವ ಸಚಿವ ಸಂಪುಟ ಸಭೆಯಲ್ಲಿ ಮೀಸಲಾತಿ ಬಗ್ಗೆ ಸ್ಪಷ್ಟ ನಿಲುವನ್ನು ಕೈಗೊಳ್ಳದಿದ್ದರೆ, ಮರುದಿನವೇ ತುರ್ತು ಸಭೆ ಸೇರಿ , ಯಾವ ದಿನಾಂಕದಂದು ಯಾವ ಭಾಗಗಳಲ್ಲಿ ರಾಜ್ಯ ಯಾತ್ರೆ ಹೋರಡಬೇಕು, ಯಾವ ವ್ಯಕ್ತಿಗಳನ್ನು ಬೆಂಬಲಿಸಬೇಕು, ಹಾಗೂ ಯಾವ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನ ನಿಲ್ಲಿಸಬೆಕೊ ಬೇಡವೋ ಎಂಬುದನ್ನು ನಿರ್ಧರಿಸಲಾಗುವುದು.
-
ಪಕ್ಷಾತಿತವಾಗಿ ಚುನಾವಣೆ ಬಗ್ಗೆ ಮಾಹಿತಿ ಪಡೆಯಲು ದಾನಪ್ಪ ಗೌಡರು ಹಾಗೂ ಚುನಾವಣೆ ಪ್ರಚಾರ ಮಾಡಲು ಬಿಎಸ್ ಪಾಟೀಲ್ ನಾಗರಳ್ ಹುಲಿ ಅಧ್ಯಕ್ಷತೆಯಲ್ಲಿ ಸಲಹಾ ಸಮಿತಿ ರಚಿಸಲಾಗಿದೆ.
ಇದೇ ವೇಳೆ, ಎರಡು ವರ್ಷ ಎರಡು ತಿಂಗಳ ಪಂಚಮಸಾಲಿ ಗೌಡ ಮಲೆಗೌಡ ದೀಕ್ಷಾ ಲಿಂಗಾಯತ ಐತಿಹಾಸಿಕ ಚಳುವಳಿಯನ್ನು ಬೆಂಬಲಿಸಿ ನಡೆದ ತಮಟೆ ಚಳವಳಿ ಗಮನಸೆಳೆಯಿತು. ತಾಯಿ ಮೇಲೆ ಆಣೆ ಮಾಡಿ ಮೋಸ ಮಾಡಿರುವ ಮುಖ್ಯಮಂತ್ರಿಗಳ ವಿಳಂಬ ನೀತಿಯನ್ನು ಖಂಡಿಸಿ ಈ ತಮಟೆ ಚಳವಳಿ ಗಮನಸೆಳೆಯಿತು. ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕು ಘಟಕದ ಕಾರ್ಯಕರ್ತರು ತಮಟೆ ಬಾರಿಸುತ್ತಾ ಫ್ರೀ ಡಮ್ ವೃತ್ತದವರೆಗೆ ಮಾನವ ಸರಪಳಿ ನಿರ್ಮಿಸಿ, ರಸ್ತೆ ತಡೆ ಮಾಡಿ ಸರ್ಕಾರದ ಗಮನ ಸೆಳೆದರು.