ಬೆಂಗಳೂರು: ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಸಿಲುಕಿರುವ ಪ್ರಜ್ವಲ್ ರೇವಣ್ಣ ನಿಮ್ಮ ಎಂಪಿ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ಕಾಂಗ್ರೆಸ್ ನಾಯಕರನ್ನು ತರಾಟಗೆ ತೆಗೆದುಕೊಂಡಿದ್ದಾರೆ.
ಪ್ರಜ್ವಲ್ ರೇವಣ್ಣ ಪ್ರಕರಣ ಕುರಿತಂತೆ ಬಿಜೆಪಿ ನಾಯಕರ ಹೆಸರುಗಳನ್ನು ಎಳೆದು ತರುತ್ತಿರುವ ಕಾಂಗ್ರೆಸ್ ನಾಯಕರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅಶೋಕ್, ‘ಪ್ರಜ್ವಲ್ ರೇವಣ್ಣ ನಿಮ್ಮ ಎಂಪಿ’ ಎಂದು ಹಳೆಯ ಕಾಂಗ್ರೆಸ್-ಜೆಡಿಎಸ್ ಮೈತ್ರಿಯತ್ತ ಬೊಟ್ಟು ಮಾಡಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರಜ್ವಲ್ ಪ್ರಕರಣ ಬಗ್ಗೆ ಕಾಂಗ್ರೆಸ್ ನಾಯಕರನ್ನು ತಮ್ಮದೇ ದಾಟಿಯಲ್ಲಿ ಆರ್.ಅಶೋಕ್ ತರಾಟೆಗೆ ತೆಗೆದುಕೊಂಡರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತಿಗೆ ಮೂರು ಕಾಸಿನ ಬೆಲೆ ಇಲ್ಲ. ಭಯೋತ್ಪಾದನಾ ಚಟುವಟಿಕೆಗೆ ಅವರು ಹೇಳಿದ ಮಾತೆಲ್ಲ ಸುಳ್ಳಾಯಿತು. ಅವರು ಗೃಹಸಚಿವ ಅಮಿತ್ ಶಾ ಬಗ್ಗೆ ಹೇಳಿದ ಮಾತಿಗೆ ಬೆಲೆ ಕೊಡಬೇಕಾಗಿಲ್ಲ. 28 ಸ್ಥಾನದಲ್ಲಿ ಕೆಲವು ಸ್ಥಾನಗಳನ್ನು ಜೆಡಿಎಸ್‌ಗೆ ಬಿಟ್ಟಿದ್ದು, ಅಲ್ಲಿ ಯಾರು ಸ್ಪರ್ಧಿಸಬೇಕೆಂದು ಜೆಡಿಎಸ್ ತೀರ್ಮಾನಿಸುತ್ತದೆ. ಪ್ರಜ್ವಲ್ ರೇವಣ್ಣ ನಮ್ಮ ಸಂಸದರಲ್ಲ. ಇವರೇ ಜೋಡೆತ್ತು ಎಂದು ಅವರ ಜೊತೆಗೆ ಇದ್ದು ಮೊದಲಿಗೆ ಗೆಲ್ಲಿಸಿದ್ದರು. ಇದಕ್ಕೆ ಕಾಂಗ್ರೆಸ್ಸೇ ಉತ್ತರ ನೀಡಬೇಕು. ಪ್ರಜ್ವಲ್ ವಿದೇಶಕ್ಕೆ ಹೋಗುವಾಗ ಕರ್ನಾಟಕ ಪೊಲೀಸರು ಏನು ಮಾಡುತ್ತಿದ್ದರು? ಜಿಲ್ಲಾಧಿಕಾರಿ ಏನು ಮಾಡುತ್ತಿದ್ದರು? ಕಾಂಗ್ರೆಸ್ ಸರ್ಕಾರ ಗುಪ್ತಚರ ದಳ ವಿಫಲವಾಗಿದೆ ಎಂದು ಒಪ್ಪಿಕೊಳ್ಳಲಿ ಎಂದರು.
ಈ ದೇಶದ ಕಾನೂನಿಗೆ, ಸಂವಿಧಾನಕ್ಕೆ ಬಿಜೆಪಿ ಗೌರವ ನೀಡುತ್ತದೆ. ಯಾವುದೇ ಕಾರಣಕ್ಕೂ ಇಂತಹ ಘಟನೆಗೆ ಪಕ್ಷ ಬೆಂಬಲ ನೀಡುವುದಿಲ್ಲ. ಬಿಜೆಪಿಯಿಂದ ಕಠಿಣ ಕ್ರಮ ವಹಿಸಲಾಗುತ್ತದೆ. ಸಿದ್ದರಾಮಯ್ಯನವರು ಅಧಿಕಾರ ಬಿಟ್ಟು ಇಳಿದು ಬಿಜೆಪಿಗೆ ಅಧಿಕಾರ ನೀಡಿದರೆ 24 ಗಂಟೆಯಲ್ಲಿ ಪ್ರಜ್ವಲ್ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಅಥವಾ ಪೊಲೀಸ್ ಇಲಾಖೆಯ ಮೇಲೆ ಹಿಡಿತ ಇಲ್ಲ ಎಂದು ಕಾಂಗ್ರೆಸ್ ಸರ್ಕಾರ ಒಪ್ಪಿಕೊಳ್ಳಲಿ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯನ್ನು ಏಕೆ ಪ್ರಶ್ನೆ ಮಾಡಬೇಕು, ರಾಜ್ಯದ ಕಾನೂನು ಪಾಲನೆ ಕೇಂದ್ರ ಸರ್ಕಾರ ಮಾಡಬೇಕೆ ಎಂದು ಅಶೋಕ್ ಪ್ರಶ್ನಿಸಿದರು.