ಚಿತ್ರದುರ್ಗ: ಪೆನ್ ಡ್ರೈವ್ ಕೇಸ್ಗೂ ರಾಜ್ಯ ಸರ್ಕಾರಕ್ಕೂ ಯಾವುದೇ ಸಙಬಂಧ ಇಲ್ಲ ಎಂದು ಸ್ಪಷ್ಟಪಡಿಸಿರುವ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ಮಾಜಿ ಸಚಿವ ರೇವಣ್ಣ, ಶಿವರಾಮೇಗೌಡ, ದೇವಾರಾಜೇಗೌಡರ ವೈಯಕ್ತಿಕ ಕಿತ್ತಾಟದಿಂದಾಗಿ ಪೆನ್ ಡ್ರೈವ್ ಅವಾಂತರ ಸೃಷ್ಟಿಯಾಗಿದೆ ಎಂದು ವಿಶ್ಲೇಷಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಳೆನರಸೀಪುರದಲ್ಲಿ ಇರಬೇಕಿದ್ದ ಜಗಳ ರಾಜ್ಯ ಮಟ್ಟಕ್ಕೆ ಬಂದಿದೆ. ಸರ್ಕಾರಕ್ಕೆ, ಪೆನ್ ಡ್ರೈವ್ ಗೂ, ಡಿಕೆಶಿ ಯಾವ ಸಂಬಂಧ ಇಲ್ಲ ಎಂದರು. ದೇವೇರಾಜೇಗೌಡ ರಾಜಕೀಯ ಪಕ್ಷದ ಸದಸ್ಯರಾಗಿದ್ದು, ಅವರು ಬಿಜೆಪಿ ಪಕ್ಷದಿಂದ ನಿಂತು ಒಮ್ಮೆ ಸೋತಿದ್ದಾರೆ. ಅವರು ಬಿಜೆಪಿಯವರು ಹೇಳಿದಂತೆ ಹೇಳುತ್ತಾರೆ ಎಂದರು. ನಮ್ಮ ಸರ್ಕಾರಕ್ಕಾಗಲೀ ಕಾಂಗ್ರೆಸ್ ಪಕ್ಷಕ್ಕಾಗಲೀ ಈ ಪೆನ್ ಡ್ರೈವ್ ವಿಚಾರಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ರಾಮಲಿಂಗ ರೆಡ್ಡಿ ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಬಿಜೆಪಿ ಆರೋಪಕ್ಕೆ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ ರಾಮಲಿಂಗ ರೆಡ್ಡಿ, ಬಿಜೆಪಿ ನಾಯಕರು ಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದರಲ್ಲದೆ, ಬಿಜೆಪಿ ಸರ್ಕಾರದ ಅವಧಿಯಲ್ಲಿನ ಅಪರಾಧ ಫ್ರಕರಣಗಳ ಅಂಕಿ ಅಂಶ ಒದಗಿಸಿದರು. ಬಿಜೆಪಿ ಸರ್ಕಾರವಿದ್ದಾಗ 1350ಕ್ಕೂ ಹೆಚ್ಚು ಕೊಲೆಗಳಾಗಿವೆ ಎಂದು ಬೊಟ್ಟು ಮಾಡಿದ ಸಾರಿಗೆ ಸಚಿವರು, ಬಿಜೆಪಿ ಅವಧಿಯಲ್ಲಿನ 1350 ಕೊಲೆಗಳ ಸಂಖ್ಯೆ ಹೆಚ್ಚೋ ಅಥವಾ ಕಾಂಗ್ರೆಸ್ ಸರ್ಕಾರದ ಅವಧಿಯದ್ದೆಂದು ಬಿಜೆಪಿ ನಾಯಕರು ಹೇಳುತ್ತಿರುವ 400ರ ಸಂಖ್ಯೆ ಹೆಚ್ಚೋ ಎಂದು ಪ್ರಶ್ನಿಸಿದರು.