ಬೆಂಗಳೂರು: ಅಸಂಖ್ಯ ಮಹಿಳೆಯರ ಲೈಂಗಿಕ ಶೋಷಣೆ ಮಾಡಿರುವ ಆರೋಪ ಎದುರಿಸುತ್ತಿರುವ ಎನ್ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಪಾಸ್ಪೋರ್ಟ್ ರದ್ದುಪಡಿಸುವಂತೆ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿಗೆ ಮನವಿ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪ್ರಜ್ವಲ್ ಪುರಾಣ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಹಾಸನ ಲೋಕಸಭಾ ಸದಸ್ಯ ಮತ್ತು NDA ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ಅಸಂಖ್ಯಾತ ಮಹಿಳೆಯರ ಮೇಲೆ ಲೈಂಗಿಕ ಶೋಷಣೆ ಮಾಡಿದ್ದಾರೆ ಎಂಬ ಗಂಭೀರ ಪ್ರಕರಣದ ಬಗ್ಗೆ ನಿಮಗೆ ತಿಳಿದಿರಲೇಬೇಕು. ಸಂಸದ ಹಾಗೂ ಹಾಸನ ಲೋಕಸಭೆಯ ಎನ್ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ಎದುರಿಸುತ್ತಿರುವ ಆರೋಪಗಳು ಭಯಾನಕ ಮತ್ತು ನಾಚಿಕೆಗೇಡಿನಾಗಿದ್ದು, ಇದು ದೇಶದ ಆತ್ಮಸಾಕ್ಷಿಯನ್ನು ಅಲ್ಲಾಡಿಸಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನಮ್ಮ ಸರ್ಕಾರವು 28.042024ರಂದು ಕ್ರಿಮಿನಲ್ ಇನ್ವೆಸ್ಟಿಗೇಶನ್ ಡಿಪಾರ್ಟ್ಮೆಂಟ್ (ಸಿಐಡಿ) ಅಡಿಯಲ್ಲಿ ವಿಶೇಷ ತನಿಖಾ ತಂಡವನ್ನು (SIT) ರಚಿಸಿದೆ ಮತ್ತು ತನಿಖೆಯನ್ನು ಸರಿಯಾದ ಶ್ರದ್ಧೆಯಿಂದ ಪ್ರಾರಂಭಿಸಿದೆ. ಹಲವಾರು ಮಹಿಳೆಯರ ವಿರುದ್ಧದ ಆಪಾದಿತ ಅಪರಾಧಗಳ ನಿಜ ಸ್ವರೂಪ ಹೊರಬಿದ್ದ ಕೂಡಲೇ ಸಂತ್ರಸ್ತರು ಪ್ರಜ್ವಲ್ ರೇವಣ್ಣ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದು, ಆ ಕೂಡಲೇ ಎಸ್ಐಟಿ ರಚನೆ ಮಾಡಲಾಗಿದ್ದು, 28.04.2024ರಂದು ಎಫ್ಐಆರ್ ದಾಖಲಿಸಲಾಗಿದೆ.
ಆದಾಗ್ಯೂ, ಪೊಲೀಸ್ ಕೇಸ್ ಮತ್ತು ಬಂಧನ ಸಾಧ್ಯತೆ ಬಗ್ಗೆ ಸುಳಿವರಿತ ಆರೋಪಿ ಸಂಸದ ಮತ್ತು ಲೋಕಸಭೆಯ ಎನ್ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು 27.04.2024ರಂದು ದೇಶ ಬಿಟ್ಟು ವಿದೇಶಕ್ಕೆ ಪ್ರಯಾಣಿಸಿದ್ದಾರೆ. ಅವರು ತಮ್ಮ ರಾಜತಾಂತ್ರಿಕ ಪಾಸ್ಪೋರ್ಟ್ನಲ್ಲಿ ವಿದೇಶ ಪ್ರವಾಸ ಮಾಡುತ್ತಿದ್ದಾರೆ ಎಂದು ವರದಿಗಳಿಂದ ತಿಳಿದುಬಂದಿದೆ ಎಂದು ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿಯವರಿಗೆ ಬರೆದಿರುವ ಪತ್ರದಲ್ಲಿ ಗಮನಸೆಳೆದಿದ್ದಾರೆ.
ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಲು ಎಸ್ಐಟಿ ಪೊಲೀಸರು ಹಗಲಿರುಳು ತನಿಖೆ ನಡೆಸುತ್ತಿದ್ದು, ಇಂತಹಾ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ದೇಶಕ್ಕೆ ಮರಳಿ ಪಡೆಯುವುದು ಅತ್ಯಂತ ಮಹತ್ವದ್ದಾಗಿದೆ. ಆದ್ದರಿಂದ ಅವರು ದೇಶದ ಕಾನೂನಿನ ಪ್ರಕಾರ ತನಿಖೆ ಮತ್ತು ವಿಚಾರಣೆ ಎದುರಿಸಬೇಕಾಗಿದೆ. ಅದಕ್ಕೆ ಪೂರಕವಾಗಿ, ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್ಪೋರ್ಟ್ ರದ್ದುಗೊಳಿಸಲು ಮತ್ತು ಭಾರತ ಸರ್ಕಾರದ ರಾಜತಾಂತ್ರಿಕ ಮತ್ತು ಪೊಲೀಸ್ ಚಾನೆಲ್ಗಳನ್ನು ಬಳಸಿಕೊಂಡು ಅಂತಹ ಇತರ ಕ್ರಮಗಳನ್ನು ಕೈಗೊಳ್ಳಲು ವಿದೇಶಾಂಗ ವ್ಯವಹಾರಗಳು ಮತ್ತು ಗೃಹ ವ್ಯವಹಾರಗಳ ಸಚಿವಾಲಯಗಳಿಗೆ ನಿರ್ದೇಶನ ನೀಡಬೇಕೆಂದು ಸಿಎಂ ಅವರು ಪ್ರಧಾನಿ ಮೋದಿಯವರನ್ನು ಒತ್ತಾಯಿಸಿದ್ದಾರೆ.
ಕಾನೂನಿನ ಸಂಪೂರ್ಣ ಬಲವನ್ನು ಎದುರಿಸಲಾಗದೆ ಪರಾರಿಯಾಗಿರುವ ಸಂಸದನ ಶೀಘ್ರ ಮರಳುವಿಕೆ ಅಗತ್ಯವಿದ್ದು, ಅಂತರರಾಷ್ಟ್ರೀಯ ಪೊಲೀಸ್ ಏಜೆನ್ಸಿಗಳಿಗೂ ಕರ್ನಾಟಕದ SITಯು ಎಲ್ಲಾ ಅಗತ್ಯ ವಿವರಗಳನ್ನು ಒದಗಿಸುತ್ತದೆ. ಈ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲಾ ಕಾನೂನು ಔಪಚಾರಿಕತೆಗಳನ್ನು ಪೂರೈಸುತ್ತದೆ ಎಂದು ಸಿದ್ದರಾಮಯ್ಯ ಅವರು ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ಭರವಸೆ ನೀಡಿದ್ದಾರೆ.