ಬೆಂಗಳೂರು: ಮೀಸಲು ಪ್ರಮಾಣವನ್ನು ಹೆಚ್ಚಳ ಮಾಡಬೇಕು ಎಂದು ಎಲ್ಲ ಸಮುದಾಯಗಳು ಕೇಳುವುದು ಸಹಜ. ಪ್ರತಿಯೊಬ್ಬರಿಗೂ ಅವರದ್ದೇ ಆದ ಆಕಾಂಕ್ಷೆಗಳಿರುತ್ತವೆ. ವೈಜ್ಞಾನಿಕವಾಗಿ ಹಾಗೂ ನ್ಯಾಯ ಸಮ್ಮತವಾಗಿ ಯಾರಿಗೆ ಮೀಸಲು ಸೌಲಭ್ಯ ಸಿಗಬೇಕೋ ಅವರಿಗೆ ನೀಡಲು ಸರಕಾರ ಸಂವಿಧಾನದ ಚೌಕಟ್ಟನಲ್ಲಿ ಪ್ರಯತ್ನ ಮಾಡಲಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಬೆಂಗಳೂರಿನ ಸರಕಾರಿ ಕಲಾ ಕಾಲೇಜಿನಲ್ಲಿ ಗುರುವಾರ ನೂತನ ಜಿಮ್ ಹೌಸ್ ಹಾಗೂ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಡಿಸಿಎಂ ಅಶ್ವತ್ಥನಾರಾಯಣ, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಒಕ್ಕಲಿಗರಿಗೆ ಮೀಸಲು ಹೆಚ್ಚಿಸುವ ಹಾಗೂ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವ ಬೇಡಿಕೆ ಇಟ್ಟಿರುವ ಬಗ್ಗೆ ಪ್ರತಿಕ್ರಿಯೆ ನೀಡಿದರು.
ವಿವಿಧ ಸಮುದಾಯಗಳು ಮೀಸಲು ಸೌಲಭ್ಯಕ್ಕಾಗಿ ಹೋರಾಟ ನಡೆಸುತ್ತಿವೆ. ಸರಕಾರದ ಮುಂದೆ ಬೇಡಿಕೆ ಮಂಡಿಸುತ್ತಿವೆ. ಇದೀಗ ಒಕ್ಕಲಿಗರು ಬೇಡಿಕೆ ಇಟ್ಟಿದ್ದಾರೆ. ಎಲ್ಲರ ಬೇಡಿಕೆಗಳನ್ನು ಸರಕಾರ ಪರಿಶೀಲನೆ ಮಾಡಲಿದೆ. ಇತರೆ ಸಮುದಾಯಗಳಲ್ಲಿ ಇರುವಂತೆ ಒಕ್ಕಲಿಗರಲ್ಲೂ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ಜನರಿದ್ದಾರೆ. ಹೀಗಾಗಿ ಸ್ವಾಮೀಜಿ ಅವರು ಬೇಡಿಕೆ ಇಟ್ಟಿದ್ದಾರೆ. ಕೇಳುವುದರಲ್ಲಿ ತಪ್ಪೇನಿದೆ? ಈ ಎಲ್ಲ ಬೇಡಿಕೆ ಹಾಗೂ ಸಮುದಾಯಗಳ ಸ್ಥಿತಿಗತಿಗಳನ್ನು ಸರಕಾರ ಪರಿಗಣನೆಗೆ ತೆಗೆದುಕೊಳ್ಳಲಿದೆ. ಯಾರಿಗೆ ಅನ್ಯಾಯ ಆಗಿದೆಯೋ ಅವರೆಲ್ಲರಿಗೂ ಮೀಸಲು ಸೌಲಭ್ಯ ಸಿಗಲಿ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಉಪ ಮುಖ್ಯಮಂತ್ರಿ ಹೇಳಿದರು.
ನೂತನ ಪಾರ್ಕಿಂಗ್ ನೀತಿ ಬಗ್ಗೆ ನಿರ್ಧಾರವಿಲ್ಲ:
ದುಬಾರಿ ಪಾರ್ಕಿಂಗ್ ಶುಲ್ಕ ವಿಧಿಸಿ ನಗರದಲ್ಲಿ ವಾಹನ ಸಂಚಾರ ಪ್ರಮಾಣವನ್ನು ಕಡಿಮೆ ಮಾಡಿ ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸುವ ಪ್ರಸ್ತಾವನೆಯ ಬಗ್ಗೆ ಸರಕಾರ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಡಿಸಿಎಂ ಡಾ.ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದರು.
ತಜ್ಞರ ಸಮಿತಿಯಿಂದ ಈ ಬಗ್ಗೆ ಸಲಹೆಯಷ್ಟೇ ಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಸರಕಾರ ತಾನೆ ನಿರ್ಧಾರ ಕೈಗೊಳ್ಳಬೇಕಲ್ಲವೆ ಎಂದ ಅವರು, ಈ ಬಗ್ಗೆ ಇನ್ನೂ ಯಾವ ರೀತಿಯ ಚರ್ಚೆ ಅಥವಾ ಪರಿಶೀಲನೆ ನಡೆದಿಲ್ಲ. ಮುಂದಿನ ದಿಗಳಲ್ಲಿ ಸಮಾಜಕ್ಕೆ ಒಳ್ಳೆಯದಾಗುವ, ಸಮಗ್ರವಾಗಿ ಎಲ್ಲ ಅಂಶಗಳನ್ನು ಪರಿಗಣಿಸಿ ನಿರ್ಧಾರ ಕೈಗೊಳ್ಳವುದು ಆಗುತ್ತದೆ ಎಂದರು.