ಬೆಂಗಳೂರು: ನಮ್ಮ ರಾಜ್ಯದಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಎರಡು ರಾಷ್ಟೀಯ ಪಕ್ಷಗಳ ವಿರುದ್ಧ ಹೋರಾಟ ನಡೆಸಿ ಜಯಶೀಲರಾಗಿರುವ ಜೆಡಿಎಸ್ ಬೆಂಬಲಿತರಿಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಅಭಿನಂದನೆ ಸಲ್ಲಿಸಿದ್ದಾರೆ.
ಫಲಿತಾಂಶ ಬೆನ್ನಲ್ಲೇ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಪಕ್ಷದ ಎಲ್ಲಾ ಆತ್ಮೀಯ ಸದಸ್ಯರಿಗೆ ತುಂಬು ಹೃದಯದ ಅಭಿನಂದನೆಯನ್ನು ಸಲ್ಲಿಸುತ್ತಿರುವುದಾಗಿ ಹೇಳಿದ್ದಾರೆ.
ಚುನಾವಣೆ ಎಂದ ಮೇಲೆ ಸೋಲು ಗೆಲುವು ಸಹಜ , ಸೋತ ನನ್ನ ಸ್ನೇಹಿತರು ದೃತಿಗೆಡುವುದು ಬೇಡ , ನಿಮ್ಮ ಸಹಾಯ ಮತ್ತು ಈಗ ಪಂಚಾಯಿತಿಗೆ ಆಯ್ಕೆಯಾಗಿರುವ ಸದಸ್ಯರ ಸಹಾಯದಿಂದಲೇ ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಜೊತೆಗೂಡಿ 2023 ರ ಸಾರ್ವತ್ರಿಕ ಚುನಾವಣೆಯಲ್ಲಿ ಈ ಪ್ರಾದೇಶಿಕ ಪಕ್ಷವನ್ನು ನಮ್ಮ ರಾಜ್ಯದಲ್ಲಿ ಸ್ವತಂತ್ರವಾಗಿ ಅಧಿಕಾರಕ್ಕೆ ತರಲು ನಾನು ಹಗಲು ರಾತ್ರಿ ಶ್ರಮಿಸುತ್ತೇನೆ ಎಂದವರು ಕಾರ್ಯಕರ್ತರಲ್ಲಿ ಭರವಸೆ ತುಂಬಿದ್ದಾರೆ.
ಜೊತೆಗೆ ಈ ರಾಜ್ಯದಲ್ಲಿ ನಮ್ಮ ಪ್ರಾದೇಶಿಕ ಪಕ್ಷವನ್ನು ಉಳಿಸಲು ಈ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳಿಗೆ ಮತ ನೀಡಿದ ರಾಜ್ಯದ ಜನತೆಗೆ ತಾವು ಸದಾ ಚಿರಋಣಿಯಾಗಿರುವುದಾಗಿ ದೇವೇಗೌಡರು ಹೇಳಿದ್ದಾರೆ.





















































