ಬೆಂಗಳೂರು: ಪಂಚಮಸಾಲಿ ಮೀಸಲಾತಿ ಹೋರಾಟ ಕ್ಲೈಮ್ಯಾಕ್ಸ್ ಘಟ್ಟ ತಲುಪಿದ್ದು, ಬಿಜೆಪಿ ಸರ್ಕಾರಕ್ಕೆ ‘ಮಾಡು ಇಲ್ಲವೇ ಮಡಿ’ ಎಂಬ ಸ್ಥಿತಿ ನಿರ್ಮಾಣವಾಗಿದೆ. ಚುನಾವಣಾ ಸಂಧಿಕಾಲದಲ್ಲಿ ಬೊಮ್ಮಾಯಿ ಸರ್ಕಾರಕ್ಕೆ ಸದ್ಯದ ಪರಿಸ್ಥಿತಿ ‘ಅತ್ತ ಪುಲಿ ಇತ್ತ ದರಿ’ ಎಂಬಂತಿದೆ.
ರಾಜ್ಯದ ಪ್ರಬಲ ಸಮುದಾಯ ಆಗಿರುವ ಲಿಂಗಾಯತ ಪಂಚಮಸಾಲಿ ಸಮಾಜವು ರಾಜಕೀಯ ವಿಚಾರದಲ್ಲೂ ನಿರ್ಣಯಿಸುವಂಥದ್ದು. ಬಹುತೇಕ ಕ್ಷೇತ್ರಗಳು ಪಂಚಮಸಾಲಿ ಲಿಂಗಾಯತರ ಹಿಡಿತದಲ್ಲಿದೆ. ಹಾಗಾಗಿ ರಾಜ್ಯ ‘ಬಿಜೆಪಿ ಸರ್ಕಾರಕ್ಕೆ ಈ ಬೇಡಿಕೆ ಈಡೇರಿಸದೆ ಬೇರೆ ವಿಧಿಯಿಲ್ಲ; ಪ್ರತಿಪಕ್ಷ ಕಾಂಗ್ರೆಸ್ ಈ ನಿರ್ಧಾರವನ್ನು ವಿರೋಧಿಸುವ ಸ್ಥಿತಿಯಲ್ಲಿಲ್ಲ’. ಹಾಗಾಗಿ ಪಂಚಮಸಾಲಿ ಸಮುದಾಯದ ಮೀಸಲಾತಿ ಬೇಡಿಕೆಗೆ ಅಗೋಚರ ಕಾನೂನು ತೊಡಕಿರಬಹುದೇ ಹೊರತು ಯಾರ ವಿರೋಧವೂ ಇಲ್ಲ.
ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟ ಇದೀಗ ತಾರ್ಕಿಕ ಹಂತ ತಲುಪಿದೆ. ಎರಡು ವರ್ಷಗಳಿಗೂ ಹೆಚ್ಚು ಕಾಲ ವಿವಿಧ ಹಂತಗಳಲ್ಲಿ ನಡೆಯುತ್ತಾ ಬಂದಿರುವ ಈ ಹೋರಾಟ ಇದೀಗ ಕೂಡಲಸಂಗಮ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಿರಂತರ ಸತ್ಯಾಗ್ರಹದ ರೂಪ ತಳೆದಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಈ ಸತ್ಯಾಗ್ರಹ ಇದೀಗ 70ನೇ ದಿನದತ್ತ ತಲುಪಿದೆ. ಅದಾಗ್ಯೂ ಮಾರ್ಚ್ 25ರಂದು ಈ ಸರ್ಕಾರದ ಕೊನೆಯ ಸಂಪುಟ ಸಭೆ ನಡೆಯಲಿದ್ದು ಪಂಚಮಸಾಲಿ ಮೀಸಲಾತಿ ಕುರಿತ ನಿಲುವು ತೀವ್ರ ಕುತೂಹಲ ಕೆರಳುವಂತೆ ಮಾಡಿದೆ. ಮೀಸಲಾತಿ ಬಗ್ಗೆ ಪ್ರಧಾನಿ ಕಚೇರಿಯಿಂದಲೂ ಭರವಸೆ ಸಿಕ್ಕಿರುವುದರಿಂದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಬಳಗದಲ್ಲೂ ನಿರೀಕ್ಷೆ ಹೆಚ್ಚಾಗಿದೆ.
ಈ ಮಧ್ಯೆ, ಕಾನೂನು ತೊಡಕಿನ ನೆಪದಲ್ಲಿ ಮೀಸಲಾತಿ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳದಿದ್ದರೆ ಪ್ರತಿತಂತ್ರ ರೂಪಿಸಲು ಪಂಚಮಸಾಲಿ ರಣವ್ಯೂಹ ರೂಪಿಸಿದಂತಿದೆ ಚುನಾವಣಾ ಅಖಾಡದಲ್ಲಿ ಹೋರಾಟ ನಡೆಸಲು ಲಿಂಗಾಯತ ಪಂಚಮಸಾಲಿ ಲಿಂಗಾಯತ ಪ್ರಮುಖರು ತೆರೆಮರೆಯಲ್ಲಿ ತಯಾರಿ ನಡೆಸಿದ್ದಾರೆ. ಈ ಸಂಬಂಧ ಮಾರ್ಚ್ 25ರಂದು ಪಂಚಮಸಾಲಿ ಮೀಸಲಾತಿ ಸಮಿತಿಯು ತುರ್ತು ಕಾರ್ಯಕಾರಿಣಿ ಸಭೆ ಕರೆದಿದೆ.
ಬಸನಗೌಡ ಪಾಟೀಲ್ ಯತ್ನಾಳ್, ವಿಜಯಾನಂದ ಕಾಶಪ್ಪನವರ್ ಸಹಿತ ಪ್ರಮುಖ ನಾಯಕರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಇದೇ ವೇಳೆ, ‘ಮೀಸಲಾತಿ ಬೇಡಿಕೆ ಸ್ಪಷ್ಟ.. ಜಾರಿಗೆ ಇಲ್ಲ ಕಷ್ಟ.. ಮರೆತರೆ ಬಿಜೆಪಿಗೆ ನಷ್ಟ’ ಎಂಬ ಸಂದೇಶ ಕೂಡಾ ಚಲಾವಣೆಯಲ್ಲಿರುವುದರಿಂದ ರಾಜ್ಯ ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬ ಕುತೂಹಲ ಎಲ್ಲರನ್ನೂ ಕಾಡಿದೆ.