ಬೆಂಗಳೂರು: ಪಂಚಮಸಾಲಿ ಲಿಂಗಾಯತ ಸಮಾಜದ ಮೀಸಲಾತಿ ಹೋರಾಟ ತೀವ್ರಗೊಂಡಿದೆ. ಈ ವಿಚಾರದಲ್ಲಿ ಕೂಡಲಸಂಗಮ ಪಂಚಮಸಾಲಿಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಸುದೀರ್ಘ ಹೋರಾಟ ರಾಜ್ಯವ್ಯಾಪಿ ವಿಸ್ತಾರಗೊಂಡಿದೆ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಹೋರಾಟ ನಡೆದಿದ್ದು ಸರಣಿ ಸತ್ಯಾಗ್ರಹದಲ್ಲಿ ಪಂಚಮಸಾಲಿ ಸಮುದಾಯದ ಮುಖಂಡರು ಪಕ್ಷಾತೀತವಾಗಿ ಸಹಭಾಗಿಗಳಾಗುತ್ತಿದ್ದಾರೆ.
‘ಸಂಕ್ರಾಂತಿ ಸತ್ಯಾಗ್ರಹ’ಕ್ಕೆ ತಯಾರಿ:
ಕಳೆದ ಶಿವರಾತ್ರಿ ಸಂದರ್ಭದಲ್ಲಿ ಹಬ್ಬವನ್ನು ತಿರಸ್ಕರಿಸಿ ಸತ್ಯಾಗ್ರಹಕ್ಕೆ ಆಚರಣೆಯನ್ನು ಸೀಮಿತಗೊಳಿಸಿದ್ದ ಸಮುದಾಯದ ಪ್ರಮುಖರು, ಈ ಬಾರಿ ಸಂಕ್ರಾಂತಿ ಸಂದರ್ಭದಲ್ಲಿ ವಿನೂತನ ರೀತಿ ಹೋರಾಟಕ್ಕೆ ಸಿದ್ದತೆ ನಡೆಸಿದ್ದಾರೆ.
ಜನವರಿ 14 ಭಾನುವಾರದಂದು ಸಂಕ್ರಾಂತಿ ಸಂದರ್ಭದಲ್ಲಿ ಪಾದಯಾತ್ರೆಯ ತೃತೀಯ ವರ್ಷಾಚರಣೆ ನಡೆಸಲು ತಯಾರಿ ನಡೆದಿದೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಬಸವಜಯ ಮೃತ್ಯುಂಜಯ ಶ್ರೀಗಳು, ಭಾನುವಾರ ಕೂಡಲಸಂಗಮ ಪಂಚಮಸಾಲಿಪೀಠದ ಆವರಣದಲ್ಲಿ ‘ಪಾದಯಾತ್ರೆಯ ತೃತೀಯ ವರ್ಷಾಚರಣೆ’ ಹಾಗೂ ಪಂಚಮಸಾಲಿಗಳಿಗೆ 2A ಹಾಗೂ ಲಿಂಗಾಯತ ಉಪ ಸಮಾಜಗಳಿಗೆ OBC ಮೀಸಲಾತಿಗೆ ಒತ್ತಾಯಿಸಿ ಚಳುವಳಿಗಾರರ ‘ಪಂಚ ಸಂಗಮ ಸಭೆ’ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.