ಬೆಂಗಳೂರು; ಪಂಚಮಸಾಲಿ ಲಿಂಗಾಯತ ಸಮುದಾಯದ ಮೀಸಲಾತಿ ಹೋರಾಟ ಇದೀಗ ಕುತೂಹಲಕಾರಿ ಘಟ್ಟ ಸಮೀಪಿಸಿದೆ. ಬೇಡಿಕೆ ಈಡೇರಿಕಗೆ ಮಾರ್ಚ್ 15ರ ಗಡುವನ್ನು ಸಮುದಾಯದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೀಡಿದ್ದು, ಅದಾಗಲೇ ಈ ಹೋರಾಟಕ್ಕೆ ವಿವಿಧ ಸಂಘಟನೆಗಳ ಪ್ರಮುಖರು, ರಾಜಕೀಯ ನಾಯಕರು ಬೆಂಬಲ ಘೋಷಿಸಿದ್ದಾರೆ. ಇದೇ ವೇಳೆ, ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರೂ ಈ ಹೋರಾಟದ ಅಖಾಡಕ್ಕೆ ಭೇಟಿ ನೀಡಿರುವ ಬೆಳವಣಿಯು ಅಚ್ಚರಿಗೆ ಕಾರಣವಾಗಿದೆ.
ರಾಜಕೀಯ ಅಧಿಕಾರ ವಂಚಿತಗೊಂಡ ಪಂಚಮಸಾಲಿಗಳು ತಮಗೆ 2ಎ ನೀಸಲಾತಿ ನೀಡಬೇಕೆಂದು ಒತ್ತಾಯಿಸಿ ಹಲವು ವರ್ಷಗಳಿಂದ ವಿವಿಧ ಹಂತಗಳಲ್ಲಿ ಹೋರಾಟ ನಡೆಸುತ್ತಿದ್ದಾರೆ. ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಸಮುದಾಯದ ಶಕ್ತಿ ಪ್ರದರ್ಶನವೂ ನಡೆದಿತ್ತು. ಆದರೆ ಸರ್ಕಾರ ಮಾತ್ರ ಭರವಸೆಯನ್ನಷ್ಟೇ ನೀಡುತ್ತಿದೆಯೇ ಹೊರತು ಬೇಡಿಕೆ ಈಡೇರಿಕೆ ಬಗ್ಗೆ ಒಲವು ತೋರಿಲ್ಲ ಎಂಬುದು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿಯ ಆಕ್ರೋಶ.
‘ತಾಯಿ ಮೇಲೆ ಆಣೆ ಮಾಡಿರುವ ಸಿಎಂ ಬಸವರಾಜ್ ಬೊಮ್ಮಾಯಿಯವರು ತಮ್ಮ ಸಮುದಾಯಕ್ಕೆ ಅನ್ಯಾಯ ಮಾಡಿದರು’ ಎಂಬುದೂ ಪಂಚಮಸಾಲಿ ಸಮುದಾಯದ ಮುಂಂಡರ ಸಿಟ್ಟು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಿರಂತರ ಸತ್ಯಾಗ್ರಹ ನಡೆಯುತ್ತಿದೆ.
53ನೇ ದಿನದ ಸತ್ಯಾಗ್ರಹದಲ್ಲಿ ಮಂಗಳವಾರ ಕಾಂಗ್ರೆಸ್ ನಾಯಕ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಮಾಜಿ ಸಚಿವ ಆರ್.ಬಿ. ತಿಮ್ಮಪುರ್ ಸಹಿತ ಹಲವು ಮುಖಂಡರು ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ನೀಡಿದರು.
ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಪ್ರಥಮ ಜಗದ್ಗುರು ಶ್ರೀಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಧರಣಿ ನಡೆಯುತ್ತಿದ್ದು, ಮೋಸ ಮಾಡಿದ ಸಿಎಂ’ ಎಂದು ಹೋರಾಟಗಾರರು ಘೋಷಣೆ ಕೂಗುತ್ತಾ ಧರಣಿ ಕೈಗೊಳ್ಳುತ್ತಿದ್ದಾಗ ಈ ನಾಯಕರೂ ಈ ಹೋರಾಟಕ್ಕೆ ಧ್ವನಿಗೂಡಿಸಿದರು.
ಲಿಂಗಾಯತರಲ್ಲೇ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಪಂಚಮಸಾಲಿ ಸಮುದಾಯವೇ ರಾಜಕೀಯವಾಗಿ ವಂಚನೆ ಒಳಗಾಗಿದೆ. ನ್ಯಾಯಯುತ 2ಎ ಮೀಸಲಾತಿ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದ ಸತೀಶ್ ಜಾರಕಿಹೊಳಿ, ಸರ್ಕಾರ ಕೂಡಲೇ ಕೊಟ್ಟ ಮಾತಿನಂತೆ ನ್ಯಾಯ ಕಲ್ಪಿಸಬೇಕು ಎಂದು ಅಭಿಪ್ರಾಯಪಟ್ಟರು. ಮಾಜಿ ಸಚಿವರಾದ ವಿನಯ ಕುಲಕರ್ಣಿ, ಎ.ಬಿ.ಪಾಟೀಲ್ ಸಹಿತ ಅನೇಕ ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು,
ಮಂಗಳವಾರದಂದು 53ನೇ ದಿನದ ಸತ್ಯಾಗ್ರಹದಲ್ಲಿ ನಿಪ್ಪಾಣಿ ತಾಲೂಕಿನ ಲಿಂಗಾಯತ ಪಂಚಮಸಾಲಿ ಹೋರಾಟಗಾರರು ಭಾರೀ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಅಧ್ಯಕ್ಷ ಶಿವಪುತ್ರ ಮಲ್ಲೇವಾಡ, ರೋಣದ ಮಲ್ಲಣಗೌಡ , ಹಿರಿಯ ಪೊಲೀಸ್ ಅಧಿಕಾರಿ ಪ್ರಕಾಶ ಮೂಗಿ, ಸಂಸ್ಕೃತ ಪ್ರಾಧ್ಯಾಪಕ ದಾನಪ್ಪಗೌಡ, ಜಮಖಂಡಿ ಎಲ್. ಬಿ.ಪಾಟೀಲ್, ವೀರಭದ್ರ ಸ್ವಾಮಿ , ರಾಮದುರ್ಗ ಪ್ರೊ ರವಿಕಾಂತ್ ಪಾಟೀಲ್, ಕಾಂತೇಶ್ ರೇವಡಿಹಾಲ್, ಅಮರೇಶ ಅವುಟೀ ಮೊದಲಾದವರು ಭಾಗವಹಿಸಿದ್ದರು.