ಬೆಂಗಳೂರು: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ರಾಜ್ಯದ ಪ್ರಬಲ ಲಿಂಗಾಯತ ಪಂಚಮಸಾಲಿ ಸಮುದಾಯವು ಬಿಜೆಪಿ ಸರ್ಕಾರದ ವಿರುದ್ದ ರೊಚ್ಚಿಗೆದ್ದಿದೆ. ತಮಗೆ 2ಎ ಮೀಸಲಾತಿ ಕಲ್ಪಿಸಬೇಕೆಂದು ಒತ್ತಾಯಿಸಿ ನಡೆಯುತ್ತಿರುವ ಪಂಚಮಸಾಲಿ ಹೋರಾಟ ಇದೀಗ ಸಂಘರ್ಷದ ಹಾದಿಯತ್ತ ಸಾಗಿದ್ದು, ಆಡಳಿತಾರೂಢ ಬಿಜೆಪಿಗೆ ಸವಾಲಾಗಿ ಪರಿಣಮಿಸಿದೆ. ಇದೇ ವೇಳೆ, ಜಗದ್ಗುರು ಶ್ರೀ ಜಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಸತ್ಯಾಗ್ರಹದ 50ನೇ ದಿನದಂದು ಉಗ್ರ ಹೋರಾಟಕ್ಕೆ ಕರೆ ನೀಡಲಾಗಿದೆವರ್ಷಗಳ ಹಿಂದೆ ಸುದೀರ್ಘ ಹೋರಾಟದ ನಂತರ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನ ನಡೆಸಿದ್ದ ಪಂಚಮಸಾಲಿ ಸಮುದಾಯ, ಆ ವೇಳೆ ಸರ್ಕಾರದ ಭರವಸೆ ಹಿನ್ನೆಲೆಯಲ್ಲಿ ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಆದರೆ ಭರವಸೆ ಈಡೇರದ ಕಾರಣ ಸರಣಿ ಹೋರಾಟ ನಡೆಸಲಾಗಿತ್ತು. ಮಧ್ಯಪ್ರವೇಶ ಮಾಡಿದ್ದ ಸಿಎಂ ಬಸವರಾಜ್ ಬೊಮ್ಮಾಯಿಯವರು ‘ತಾಯಿ ಮೇಲೆ ಆಣೆ’ ಮಾಡಿ ಪಂಚಮಸಾಲಿ ಸಮುದಾಯದ ಮೀಸಲಾತಿ ಬೇಡಿಕೆಯನ್ನು ಈಡೇರಿಸುವ ಭರವಸೆ ನೀಡಿದ್ದರು. ಆದರೆ ಅನಂತರ ಮಾತು ಮರೆತಿದ್ದಾರೆ ಎಂಬುದು ಸಮುದಾಯದ ಆರೋಪ. ಈ ಹಿನ್ನೆಲೆಯಲ್ಲಿ ಇದೀಗ ಬೆಂಗಳೂರಿನಲ್ಲಿ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಿರಂರ ಸತ್ಯಾಗ್ರಹ ನಡೆಯುತ್ತಿದೆ.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಈ ಸತ್ಯಾಗ್ರಹದಲ್ಲಿ ವಿವಿಧ ಜಿಲ್ಲೆಗಳ ಹೋರಾಟ ಸಮಿತಿಗಳು ಭಾಗವಹಿಸುತ್ತಿದ್ದು, ಈ ಸತ್ಯಾಗ್ರಹವು ಮಾರ್ಚ್ 4ರಂದು 50 ದಿನಗಳನ್ನು ಪೂರೈಸಲಿದೆ. ಅಂದು ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಗ್ರಾಮ ರಸ್ತೆಗಳನ್ನು ಬಂದ್ ಮಾಡಿ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಲಾಗುವುದು ಎಂದು ಶ್ರೀಗಳು ತಿಳಿಸಿದ್ದಾರೆ.
ಎರಡು ವರ್ಷಗಳ ಎರಡು ತಿಂಗಳ ಐತಿಹಾಸಿಕ ಪಂಚಮಸಾಲಿ ಗೌಡ ಮಲೆಗೌಡ ದೀಕ್ಷಾ ಲಿಂಗಾಯತ ಚಳುವಳಿಯನ್ನು ತೀವ್ರಗೊಳಿಸುವುದಾಗಿ ಘೋಷಿಸಿರುವ ಬಸವಜಯ ಮೃತ್ಯುಂಜಯ ಶ್ರೀಗಳು, ‘ತಾಯಿ ಮೇಲೆ ಆಣೆ ಮಾಡಿ ಮೋಸ ಮಾಡಿ ಹತ್ತಿಕ್ಕಲು ಪ್ರಯತ್ನಿಸಿದ ಮುಖ್ಯಮಂತ್ರಿಗಳ ವಿಳಂಬ ನೀತಿಯನ್ನು ಖಂಡಿಸುವುದಾಗಿ ಹೇಳಿದ್ದಾರೆ.
ಶೀಘ್ರವೇ ಮೀಸಲಾತಿ ಅನುಷ್ಟಾನಗೊಳಿಸುವಂತೆ ಆಗ್ರಹಿಸಿ, ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಜನವರಿ 14ರ ಸಂಕ್ರಾಂತಿಯಂದು ಅರಂಭಗೊಂಡಿರುವ ನಿರಂತರ ಧರಣಿ ಸತ್ಯಾಗ್ರಹವು ಮಾರ್ಚ್ 4ರಂದು 50ನೇ ದಿನ ಪೂರೈಸಲಿದೆ. ಇಷ್ಟೊಂದು ಸುದೀರ್ಘ ಸತ್ಯಾಗ್ರಹ ಪಂಚಮಸಾಲಿ ಇತಿಹಾಸದಲ್ಲೇ ಮೊದಲು ಎಂದು ನೋವಿನಿಂದ ಹೇಳಬೇಕಾಗುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಈ ರೀತಿ ನಿರ್ಲಕ್ಷ್ಯ ಮಾಡುತ್ತಿರುವುದು ನಮ್ಮ ಸಮಾಜಕ್ಕೆ ಮಾಡಿದ ಘೋರ ಅವಮಾನ. ಆದ್ದರಿಂದ, ತಮ್ಮ ಗ್ರಾಮ, ತಾಲೂಕು, ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ರಸ್ತೆಗಳನ್ನು ಕನಿಷ್ಟ ಒಂದು ಗಂಟೆಯಾದರೂ ಬಂದ್ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಬೇಕೆಂದು ಸಮುದಾಯದ ಮಂದಿಗೆ ಮನವಿ ಮಾಡಿದ್ದಾರೆ. ಈ ನಡುವೆ, ಮಾರ್ಚ 15ರವರೆಗೆ ಸರ್ಕಾರಕ್ಕೆ ಕಲಾವಕಾಶ ನೀಡಲಾಗಿದೆ. ಒಂದು ವೇಳೆ ಮೀಸಲಾತಿ ಅನುಷ್ಟಾನಗೊಳಿಸದಿದ್ದರೆ , ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರವಾಸ ಮಾಡಿ ಸರ್ಕಾರ ಮಾಡಿರುವ ಅನ್ಯಾಯಗಳನ್ನು ಜನತಾ ನ್ಯಾಯಲಯದ ಮುಂದೆ ಪ್ರತಿಪಾದನೆ ಮಾಡಲಾಗುವುದು ಎಂದು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಇದೇ ವೇಳೆ ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕಿರುವ ಪಂಚಮಸಾಲಿ ಹೋರಾಟಗಾರರು, ಹೃದಯವಿಲ್ಲದ ಈ ಸರ್ಕಾರದ ಸಿಎಂ ಹಾಗೂ ಸಚಿವರುಗಳು ಈ ಬಗ್ಗೆ ನಮ್ಮ ಜಗದ್ಗುರುಗಳ ಜೊತೆಯಲ್ಲಿ ಅಥವಾ ಸಮಾಜದ ಹಿರಿಯ ಹೋರಾಟಗಾರರೊಂದಿಗೆ ಸಮಾಲೋಚನೆ ನಡೆಸದೆ ಸಮುದಾಯವನ್ನೇ ನಿರ್ಲಕ್ಷಿಸಿದೆ. ನಮ್ಮ ಜಗದ್ಗುರುಗಳನ್ನು ನಡು ಬೀದಿಯಲ್ಲಿ ಕುಳ್ಳಿರಿಸಿರುವುದು ಕಂಡರೆ, ಬೊಮ್ಮಾಯಿಯವರ ನಡವಳಿಕೆ ನಮ್ಮ ಸಮಾಜದ ವಿರೊಧಿ ನಡವಳಿಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.