ಬೆಂಗಳೂರು: ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿ ಬೆಂಗಳೂರಿನ ಸ್ವಾತಂತ್ರ ಉದ್ಯಾನವನದಲ್ಲಿ ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ನಡೆಸುತ್ತಿರುವ ಸತ್ಯಾಗ್ರಹ ತೀವ್ರಗೊಂಡಿದೆ. ಕಳೆದೆರಡು ತಿಂಗಳಿಂದ ನಿರಂತರ ಧರಣಿ ಸತ್ಯಾಗ್ರಹ ಕೈಗೊಂಡಿರುವ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರು ಇಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಭೇಟಿಯಾಗಿ ಚರ್ಚೆ ನಡೆಸಿದ ಬೆಳವಣಿಗೆ ಗಮನಸೆಳೆಯಿತು.
ಇತ್ತೀಚೆಗೆ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಎಚ್.ಡಿ.ದೇವೇಗೌಡರವರನ್ನು ಬೆಂಗಳೂರಿನ ಪದ್ಮನಾಭನನಗರದಲ್ಲಿರುವ ನಿವಾಸಕ್ಕೆ ತೆರಳಿ, ಭೇಟಿಯಾದ ಶ್ರೀಗಳು, ಅರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ 2ಎ ಮೀಸಲಾತಿ ಹೋರಾಟದ ಬಗ್ಗೆ ದೇವೇಗೌಡರು ಶ್ರೀಗಳಿಂದ ಮಾಹಿತಿ ಪಡೆದರು. ಈ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ಶ್ರೀಗಳು ಮಾಜಿ ಪ್ರಧಾನಿಯವರಲ್ಲಿ ಮನವಿ ಮಾಡಿದರು. ಎಚ್.ಡಿ.ದೇವೇಗೌಡರ ಪುತ್ರ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕೂಡಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ದೇವೇಗೌಡರ ಭೇಟಿ ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿದ ಬಸವಜಯ ಮೃತ್ಯುಂಜಯ ಶ್ರೀಗಳು ದೇವೇಗೌಡರು ಕೆಲವು ತಿಂಗಳ ಹಿಂದೆ ಆರಾಮ ಇಲ್ಲದ ಸಂದರ್ಭದಲ್ಲಿ ಅನೇಕ ಪೂಜ್ಯರು ಭೇಟಿ ಮಾಡಿದ್ದರು. ನಾವು ಬೆಳಗಾವಿಯಲ್ಲಿ ಹೋರಾಟದಲ್ಲಿ ಭಾಗಿಯಾದ್ದ ಕಾರಣ ಭೇಟಿ ಮಾಡಲು ಆಗಿರಲಿಲ್ಲ. ಆದ್ದರಿಂದ ಇಂದು ಭೇಟಿ ಮಾಡಿ ಮಾಡಿದ್ದೇನೆ ಎಂದರು. ಮಾಜಿ ಪ್ರಧಾನಿಯವರು ಬೇಗ ಗುಣಮುಖವಾಗಿ ನಾಡಿನ ಜಲ, ನೆಲ, ಭಾಷೆ, ರೈತರ ಬಗ್ಗೆ ಹೋರಾಡುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಹಾರೈಸಿದರು.
ಪಂಚ ಸೇನಾ ಅಧ್ಯಕ್ಷ ಡಾ ಬಿ.ಎಸ್.ಪಾಟಿಲ್ ನಾಗರಳ್ ಹುಲಿ, ವಿವಿಧ ಜಿಲ್ಲೆಗಳ ಪಂಚಮಸಾಲಿ ಹೋರಾಟ ಸಮಿತಿಗಳ ಪ್ರಮುಖರಾದ ಶಿವಪುತ್ರ, ಕೊಡಗಿನ ಮೋಹನ ಗೌಡ, ಬೆಳಗಾವಿಯ ರಾಜು ಬಾಗೇವಾಡಿ, ಐಟಿಬಿಟಿ ವಿಭಾಗದ ಕಾಂತೆಶ, ರಾಮದುರ್ಗದ ಮಲ್ಲನಗೌಡ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.