ದೆಹಲಿ; ಪಂಚ ರಾಜ್ಯಗಳ ಮತಸಮರದಲ್ಲಿ ಬಿಜೆಪಿ ಗಳಿಸಿದ್ದೆಷ್ಟು? ಕಳೆದುಕೊಂಡಿದ್ದೆಷ್ಟು? ಈ ಬಗ್ಗೆ ಕೇಸರಿ ಪಾಳಯದಲ್ಲೀಗ ಮಂಥನ ನಡೆದಿದೆ. ಅದರಲ್ಲೂ ಪಶ್ಚಿಮಬಂಗಾಳ, ಪಾಂಡಿಚೇರಿ, ತಮಿಳುನಾಡಿನಲ್ಲಿ ಬಿಜೆಪಿಯ ಯಶಸ್ಸು ಆರೆಸ್ಸೆಸ್ ಪಾಳಯದಲ್ಲೂ ಮಂದಹಾಸ ಮೂಡಿಸಿದೆ. ಈ ವಿಚಾರದಲ್ಲಿ ಮೋದಿ, ಅಮಿತ್ ಷಾ, ಜೆ.ಪಿ.ನಡ್ಡಾ, ಹಾಗೂ ಸಿ.ಟಿ.ರವಿ ಅವರ ಪ್ರಯತ್ನ ಮೆಚ್ಚಲೇಬೇಕಿದೆ ಎಂಬುದು ಆರೆಸ್ಸೆಸ್ ಗರಡಿಯಲ್ಲಿ ಕೇಳಿಬರುತ್ತಿರುವ ಪ್ರಶಂಸಾರ್ಹ ಮಾತುಗಳು.
ಮೂರು ಸ್ಥಾನಗಳಿಂದ ಮೂರಂಕಿಯತ್ತ..
ಪಶ್ಚಿಮ ಬಂಗಾಳದಲ್ಲಿ ಮೂರು ಸ್ಥಾನಗಳಿಂದ ಮೂರಂಕಿಗಳಿಗೆ ಸಾಗಬೇಕೆಂಬ ಗುರಿ ಆರೆಸ್ಸೆಸ್‌ನದ್ದಾಗಿತ್ತು. ಈ ಸಂಬಂಧ ದೀದಿಯನ್ನು ಮಣಿಸಲು ಮೋದಿ, ಅಮಿತ್ ಶಾ ಹೆಣೆದ ಸೂತ್ರ ಫಲಕೊಟ್ಟಿದೆ. ಏಕಾಏಕಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂಬುದು ಬಿಜೆಪಿ ವರಿಷ್ಠರಿಗೆ ತಿಳಿದಿತ್ತು. ಆದರೂ ಪಟ್ಟಕ್ಕೇರುವ ರೀತಿ ಬಿಜೆಪಿ ಧುರೀಣರು, ಕಾರ್ಯಕರ್ತರು ಸಮರದಂಗಳದಲ್ಲಿ ಸೆಣಸಾಡಿ ಗರಿಷ್ಠ ಸ್ಥಾನ ಗೆದ್ದಿದ್ದಾರೆ.
ದಕ್ಷಿಣದಲ್ಲಿ ಸಿ.ಟಿ.ರವಿ ಹೀರೋ..
ದಕ್ಷಿಣ ಭಾರತದ ಕರ್ನಾಟಕವನ್ನು ಗೆಲುವಿನ ಹೆಬ್ಬಾಗಿಲು ಎಂದು ತಿಳಿದಿದ್ದ ಬಿಜೆಪಿ ದ್ರಾವಿಡರ ನೆಲದಲ್ಲಿ ಕೇಸರಿ ಬಾವುಟ ಹಾರಿಸಿದೆ. ಪಾಂಡಿಚೇರಿಯ ಚಿತ್ರಣ ಬದಲಿಸಲು ಮುನ್ನುಡಿ ಬರೆದದ್ದೂ ಸಿ.ಟಿ.ರವಿ. ಚುನಾವಣೆಗೂ ಮುನ್ನವೇ ತಮಿಳುನಾಡು, ಪಾಂಡಿಚೇರಿ ರಾಜ್ಯಗಳಲ್ಲಿ ರಣತಂತ್ರ ರೂಪಿಸಿ ಸಮರ್ಥ ಸೈನ್ಯ ಕಟ್ಟುವಲ್ಲಿ ರವಿ ಯಶಸ್ಸಾಗಿದ್ದರು. ಆ ಪ್ರಯತ್ನವೇ ಫಲ ಕೊಟ್ಟಿರುವುದು ಎಂಬುದು ಸಂಘದ ಹಿರಿಯರು ಹಂಚಿಕೊಂಡಿರುವ ಸಂತಸದ ಮಾತುಗಳು. ಈ ಬಾರಿಯ ಚುನಾವಣೆಯಲ್ಲಿ ಪಾಂಡಿಚೇರಿಯ ಗದ್ದುಗೆಗೇರಲು ಒಂದೇ ಮೆಟ್ಟಿಲು ಇರುವಾಗಲೇ ಸಮರ ಅಂತ್ಯಗೊಂಡಿತ್ತು. ಆದರೂ ಸರ್ಕಾರ ರಚನೆಯ ಅವಕಾಶದಿಂದ ಎನ್‌ಡಿಎ ವಂಚಿತವಾಗಿಲ್ಲ. ಈ ಮೂಲಕ ದಕ್ಷಿಣ ಭಾರತದ ಮತ್ತೊಂದು ರಾಜ್ಯವೂ ಬಿಜೆಪಿ ಚಕ್ರಾಧಿಪತ್ಯದಲ್ಲಿ ಸೇರಿಕೊಂಡಿದೆ.
ಅದೆಲ್ಲದರ ನಡುವೆ ಬಿಜೆಪಿಗೆ ಪವಾಡವೆನಿಸಿದ್ದು ತಮಿಳುನಾಡು ರಾಜ್ಯ. ದ್ರಾವಿಡರ ನಾಡು ಎಂದೇ ಹೇಳಲಾಗುತ್ತಿರಿವ ತಮಿಳುನಾಡು ನಾಸ್ತಿಕರ ಪ್ರಾಬಲ್ಯದ ಪ್ರದೇಶ. ಸಂಘಪರಿವಾರದ ಚಿಂತನೆಯನ್ನು ಒಪ್ಪದ ಬಹುಪಾಲು ಸಂಘಟನೆಗಳ ಪ್ರತಿರೋಧ ಇದ್ದುದರಿಂದಲೇ ಸ್ವಾತಂತ್ರ್ಯೋತ್ತರದಲ್ಲಿ, ಹಲವು ದಶಕಗಳು ಕಳೆದರೂ ತಮಿಳುನಾಡಿನಲ್ಲಿ ಬಿಜೆಪಿ ಪ್ರಾಬಲ್ಯ ಕಂಡುಬಂದಿಲ್ಲ. ಆದರೆ ಈ ಬಾರಿ ಸೂರ್ಯೋದಯದ ನಾಡಿನಲ್ಲಿ ಬಿಜೆಪಿಯ ಹೊಸ ಶಕೆಯ ಉದಯವಾಗಿದೆ ಎನ್ನುತ್ತಿದ್ದಾರೆ ಭಗವಾದ್ಭಕ್ತರು.
ಶೂನ್ಯದಲ್ಲಿದ್ದ ತಮಿಳುನಾಡಿನ ರಣಾಂಗಣದಲ್ಲಿ ಸಿ.ಟಿ.ರವಿ ರೂಪಿಸಿದ ಕಾರ್ಯತಂತ್ರ ಫಲ ಕೊಟ್ಟಿದ್ದು, ಅವರು ರಚಿಸಿದ ಚಕ್ರವ್ಯೂಹದಲ್ಲಿ ಡಿಎಂಕೆ ವಶದಲ್ಲಿದ್ದ 4 ಸ್ಥಾನಗಳು ಬಿಜೆಪಿಗೆ ಸಿಗುವಂತಾಯಿತು. ಕೊಯಮತ್ತೂರಿನಲ್ಲಿ ವಾನತಿ ಶ್ರೀನಿವಾಸ್, ತಿರುನಲ್ವೇಲಿಯಲ್ಲಿ ನಾಯನಾರ್ ನಾಗೇಂದ್ರ, ಮೋಡಕುರುಚ್ಚಿಯಲ್ಲಿ ಡಾ.ಸರಸ್ವತಿ, ನಾಗರಕೋಯಿಲ್‌ನಲ್ಲಿ ಎಂ.ಆರ್.ಗಾಂಧಿ ಬಿಜೆಪಿ ಚಿಹ್ನೆ ಮೂಲಕ ತಮಿಳುನಾಡು ವಿಧಾನಸಭೆಯನ್ನು ಪ್ರವೇಶಿಸಿದ್ದಾರೆ.
ತಮಿಳುನಾಡಿನ ಹಲವು ಕ್ಷೇತ್ರಗಳಲ್ಲಿ ಅಲ್ಪ ಅಂತರದಿಂದ ಬಿಜೆಪಿ ಹುರಿಯಾಳುಗಳು ವೀರೋಚಿತ ಸೋಲುಂಡರೂ ಕೇಸರಿ ಸಾಮ್ರಾಜ್ಯವನ್ನು ಅವರು ಭದ್ರಗೊಳಿಸಿದ್ದಾರೆ. ಇದರ ಸೂತ್ರದಾರರಾಗಿರುವ ಸಿ.ಟಿ.ರವಿ, ಯುವಕರ ಪಾಲಿನ ಹೀರೋ ಆಗಿದ್ದು, ಇದೀಗ ಅವರು ಬಿಜೆಪಿಯ ಪ್ರಭಾವಿಗಳಲ್ಲಿ ಒಬ್ಬರಾಗಿದ್ದಾರೆ ಎಂಬುದು ಆರೆಸ್ಸೆಸ್ ನಾಯಕರ ವಿಶ್ಲೇಷಣೆ.
ಪಿನರಾಯ್ ವಿರುದ್ದ ಮಂಡಿಯೂರಿದ ‘ಅಶ್ವ’..
ಆದರೆ, ದೇವರ ನಾಡು ಕೇರಳದಲ್ಲಿ ಬಿಜೆಪಿಗೆ ಮಾತ್ರವಲ್ಲ, ಆರೆಸ್ಸೆಸ್‌ಗೂ ಮುಖಭಂಗವಾಗಿದೆ. ಅಲ್ಲಿ ಬಿಜೆಪಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ.
ಜೈತ್ರ ಯಾತ್ರೆ ಕೈಗೊಂಡಿರುವ ಬಿಜೆಪಿ ಕೇರಳದಲ್ಲೂ ಪ್ರಾಬಲ್ಯವಾಗುವ ಹೊಂಗನಸಿನಲ್ಲಿತ್ತು. ಒಂದು ಸ್ಥಾನದಿಂದ ಎರಡಂಕಿಗಾದರೂ ತಲುಪುವ ವಿಶ್ವಾಸ ಬಿಜೆಪಿ ವರಿಷ್ಠರದ್ದಾಗಿತ್ತು. ಈ ವಿಚಾರದಲ್ಲಿ ಕೇರಳ ಚುನಾವಣಾ ಉಸ್ತುವಾರಿಯಾಗಿದ್ದ ಕರ್ನಾಟಕದ ಡಿಸಿಎಂ ಅಶ್ವತ್ಥನಾರಾಯಣ ವಿಫಲರಾಗಿದ್ದಾರೆ. ಅವರು ಸಮರ್ಥ ರಣತಂತ್ರ ರೂಪಿಸಿದ್ದಲ್ಲಿ ನಿರೀಕ್ಷೆಯಲ್ಲಿದ್ದ ಪಾಲಕ್ಕಾಡ್, ಕಾಸರಗೋಡು, ನೇಮಂ ಕ್ಷೇತ್ರಗಳು ಬಿಜೆಪಿಗೆ ಸಿಗುತ್ತಿದ್ದವು. ಅದಾಗಲೇ ಬಿಜೆಪಿ ಕೈಯಲ್ಲಿದ್ದ ನೇಮಂ ಕ್ಷೇತ್ರವೂ ತಪ್ಪಿ ಹೋಗಿ ಕೇಸರಿ ಪಡೆ ಶೂನ್ಯಕ್ಕೆ ಶರಣಾಗಿದೆ. ದೇಶ ವಿದೇಶಗಳಲ್ಲಿ ಪ್ರಸಿದ್ದಿಯಲ್ಲಿರುವ ಮೆಟ್ರೋ ಮ್ಯಾನ್ ಕೂಡಾ ಗೆಲ್ಲಲು ಸಾಧ್ಯವಾಗಿಲ್ಲ.
ಈ ನಡುವೆ ಆರೆಸ್ಸೆಸ್‌ಗೆ ಸವಾಲಾಗಿದ್ದ ಕೇರಳ ಸಿಎಂ ಪಿನರಾಯ್ ವಿಜಯನ್ ತನ್ನ ಶಪಥವನ್ನು ಪೂರೈಸಿ ಮುಖಭಂಗ ಉಂಟುಮಾಡಿದ್ದಾರೆ. ಇದ್ದ ಬಿಜೆಪಿಯ ಒಂದು ಸ್ಥಾನವನ್ನೂ ಕ್ಲೋಸ್ ಮಾಡಿ ಆ ಪಕ್ಷವನ್ನು ನೇಪತ್ಯಕ್ಕೆ ಸರಿಸುವುದಾಗಿ ಪಿನರಾಯ್ ವಿಜಯನ್ ಸವಾಲು ಹಾಕಿದ್ದರು. ಈ ಸವಾಲನ್ನು ವಿಫಲಗೊಳಿಸುವ ಹೆಬ್ಬಯಕೆ ಸಂಘದ್ದಾಗಿತ್ತು. ಆದರೆ ಸಂಘದ ಈ ನಿರೀಕ್ಷೆಯನ್ನು ಸಾಕಾರಗೊಳಿಸುವಲ್ಲಿ ಅಶ್ವತ್ಥನಾರಾಯಣ ಅವರು ಆಸಕ್ತಿ ತೋರಿಲ್ಲ ಎಂಬ ಅಸಮಾಧಾನ ಕಾರಗೋಡಿನ ಸಂಘದ ಹಿರಿಯರದ್ದು.