ಇಸ್ಲಾಮಾಬಾದ್: ಪಾಕಿಸ್ತಾನವು 2014 ರಿಂದ 2023 ರಲ್ಲಿ ಅತಿ ಹೆಚ್ಚು ಆತ್ಮಹತ್ಯಾ ದಾಳಿಗಳಿಗೆ ಸಾಕ್ಷಿಯಾಗಿದೆ. ಸುಮಾರು ಅರ್ಧದಷ್ಟು ದಾಳಿಗಳು ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡಿವೆ ಎಂದು ಪಾಕಿಸ್ತಾನದ ಸಂಘರ್ಷ ಮತ್ತು ಭದ್ರತಾ ಅಧ್ಯಯನ ಸಂಸ್ಥೆ (ಪಿಐಸಿಎಸ್ಎಸ್) ಬಿಡುಗಡೆ ಮಾಡಿದ ಅಂಕಿಅಂಶಗಳು ತಿಳಿಸಿವೆ.
ಆತ್ಮಹತ್ಯಾ ದಾಳಿಗಳ ಸಂಖ್ಯೆಯಲ್ಲಿ 93% ಹೆಚ್ಚಳವಾಗಿದೆ. ಹಿಂಸಾಕಾಂಡಗಳಿಂದಾಗಿ ಸಾವುಗಳ ಪ್ರಮಾಣವೂ 226% ಏರಿಕೆಯಾಗಿದ್ದು ಹಿಂದಿನ ವರ್ಷ 2022ಕ್ಕೆ ಹೋಲಿಸಿದರೆ ಗಾಯಗೊಂಡ ವ್ಯಕ್ತಿಗಳ ಸಂಖ್ಯೆಯಲ್ಲಿ 101%ನಷ್ಟು ಉಲ್ಬಣಗೊಂಡಿದೆ ಎಂದು ಅಂಕಿಅಂಶ ಹೇಳುತ್ತದೆ. ಒಟ್ಟಾರೆ 29 ಆತ್ಮಹತ್ಯಾ ದಾಳಿಗಳು 2023 ರಲ್ಲಿ ನಡೆದಿದ್ದು ಸುಮಾರು 329 ಮಂದಿ ಸಾವನ್ನಪ್ಪಿದ್ದು, 582 ವ್ಯಕ್ತಿಗಳು ಗಾಯಗೊಂಡಿದ್ದಾರೆ ಎಂಬ ಕಳವಳಕಾರಿ ಸಂಗತಿ ಬೆಳಕಿಗೆ ಬಂದಿದೆ.
ಖೈಬರ್ ಪಖ್ತುನ್ಖ್ವಾ (ಕೆಪಿ) ಈ ದಾಳಿಗಳ ಕೇಂದ್ರವಾಗಿದ್ದು 254 ಸಾವುಗಳು ಮತ್ತು 512 ಗಾಯಗಳಿಗೆ ಕಾರಣವಾದ 23 ನಿದರ್ಶನಗಳ ವರದಿಯಾಗಿವೆ. KP ಯೊಳಗೆ ಹೊಸದಾಗಿ ವಿಲೀನಗೊಂಡ ಜಿಲ್ಲೆಗಳು 13 ಆತ್ಮಹತ್ಯಾ ದಾಳಿಗಳನ್ನು ಎದುರಿಸಿವೆ. ಬಲೂಚಿಸ್ತಾನ್ ಐದು ದಾಳಿಗಳನ್ನು ಎದುರಿಸಿದ್ದು, 67 ಸಾವುಗಳು ಮತ್ತು 52 ಗಾಯಗಳ ಪ್ರಕರಣಗಳು ದಾಖಲಾಗಿವೆ. ಸಿಂಧ್ ಒಂದು ಆತ್ಮಹತ್ಯಾ ದಾಳಿಗೆ ಸಾಕ್ಷಿಯಾಗಿದ್ದು ಅಲ್ಲಿ ಎಂಟು ಸಾವು ಮತ್ತು 18 ಗಾಯ ಪ್ರಕರಣ ದಾಖಲಾಗಿವೆ ಎಂಬ ಅಂಕಿಅಂಶ ಸಿಕ್ಕಿವೆ.
ಪ್ರಮುಖವಾಗಿ ಭದ್ರತಾ ಪಡೆಗಳನ್ನು ಈ ದಾಳಿಯ ಪ್ರಾಥಮಿಕ ಗುರಿಗಳಾಗಿ ಗುರುತಿಸಲಾಗಿದೆ, ಇದು 48% ಸಾವುಗಳು ಮತ್ತು 58% ನಷ್ಟು ಗಾಯಗಳನ್ನು ಹೊಂದಿದೆ, ನಾಗರಿಕರು ಎರಡನೇ ಅತಿ ಹೆಚ್ಚು ಬಲಿಪಶುಗಳಾಗಿದ್ದಾರೆ. 2022 ರಲ್ಲಿ 3.9% ರಿಂದ 2023 ರಲ್ಲಿ 4.7% ಕ್ಕೆ ಏರಿಕೆಯಾಗಿರುವ ಒಟ್ಟು ದಾಳಿಯ ಸಂಖ್ಯೆಯಲ್ಲಿ ಆತ್ಮಹತ್ಯಾ ದಾಳಿಗಳ ಪಾಲು ಹೆಚ್ಚಿವೆ ಎಂದು ಹೇಳಲಾಗುತ್ತಿದೆ.



























































