ಬಂಟ್ವಾಳ: ಒಬ್ಬ ಸ್ವಾವಲಂಬಿ ಕೃಷಿಕ.. ಮತ್ತೊಬ್ಬ ಕೃಷಿಯನ್ನೇ ಕೈಂಕರ್ಯ ರೂಪದಲ್ಲಿ ಅನುಸರಿಸಿ ಬೆಳೆದ ಶಾಸಕ. ಪದ್ಮಶ್ರೀಗೆ ಆಯ್ಕೆಯಾಗಿರುವ ಬಂಟ್ವಾಳದ ಮಹಾಲಿಂಗ ನಾಯ್ಕ ಹಾಗೂ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಪಾಳಯದಲ್ಲಿಂದು ಎಂದಿಲ್ಲದ ಸಂಭ್ರಮ.
ಪಟ್ಟಣದಿಂದ ಮೈಲುಗಟ್ಟಲೆ ದೂರದಲ್ಲಿ ಎಲೆಮರ ಕಾಯಿಯಂತೆ ಸದ್ದಿಲ್ಲದೆ ಸಾಧನೆ ಮಾಡಿರುವ ಮಹಾಲಿಂಗ ನಾಯ್ಕ್ ಅವರಿಗೆ ಮೋದಿ ಸರ್ಕಾರ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಈ ಬಗ್ಗೆ ಮಾಹಿತಿ ಸಿಕ್ಕಿದ್ದೇ ತಡ, ಕೃಷಿಯನ್ನೇ ಆಸರೆಯಾಗಿಸಿರುವ ಶಾಸಕ ರಾಜೇಶ್ ನಾಯ್ಕ್ ಅವರು ತನ್ನ ಕಾಯಕಲೋಕದ ಸಹೋದ್ಯೋಗಿಯಂತಿರುವ ಮಹಾಲಿಂಗ ನಾಯ್ಕರನ್ನು ಭೇಟಿಯಾಗಿ ಆಭಿನಂದಿಸಲು ನಾಯ್ಕರತ್ತ ದೌಡಾಯಿಸಿದರು. ‘ನಾಯ್ಕ್’ ಮತ್ತು ‘ನಾಯಕ’ರಿಬ್ಬರೂ ಅಪ್ಪಟ ಕೃಷಿಕರಾಗಿ, ‘ಮುಟ್ಟಳೆ’ ಧರಿಸಿ ಸಂಭ್ರಮಿಸಿದರು. ಪಕ್ಷದ ಕಾರ್ಯಕರ್ತರು ಇದನ್ನು ಸಾಕ್ಷೀಕರಿಸಿ ಸಂಭ್ರಮಿಸಿದ ಕ್ಷಣ ಕೂಡಾ ಅಪೂರ್ವ ಹಾಗೂ ಅನನ್ಯ ಸನ್ನಿವೇಶಕ್ಕೆ ಸಾಕ್ಷಿಯಾಯಿತು.
ತನಗೆ ಬೇಕಾದ ನೀರನ್ನು ತಾನೇ ಅನ್ವೇಷಿಸಿ, ಜಗತ್ತಿಗೆ ಸ್ವಾವಲಂಬನೆಯ ಪಾಠ ಹೇಳಿದವರು ಮಹಾಲಿಂಗ ನಾಯ್ಕರು. ಇವರು ಬಂಟ್ವಾಳ ತಾಲೂಕಿನವರು ಎನ್ನಲು ಹೆಮ್ಮೆಯಾಗುತ್ತದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಸಂತಸ ಹಂಚಿಕೊಂಡರು.
ಪದ್ಮಶ್ರೀ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ ಅವರ ಮನೆಗೆ ಪುತ್ತೂರು ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಹಾಗೂ ಗಣ್ಯರ ಜೊತೆ ಬೇಟಿ ಸನ್ಮಾನಿಸಿದರು. ಈ ವೇಳೆ ಮಾತನಾಡಿದ ಅವರು, ನಾವು ಕೃಷಿಕರಾಗಿದ್ದರೂ, ಮಹಾಲಿಂಗ ನಾಯ್ಕ ಅವರಿಂದ ಬಹಳಷ್ಟು ಕಲಿಯುವ ವಿಚಾರವಿದೆ. ರೈತರು ದೇಶದಲ್ಲಿ ನೀರಿಗಾಗಿ ಹೋರಾಟ ಮಾಡುವುದನ್ನು ನೋಡಿದ್ದೇವೆ. ತನಗೆ ಬೇಕಾದ ನೀರನ್ನ ತಾನೇ ಅನ್ವೇಷಣೆ ಮಾಡಿ ಜಗತ್ತಿಗೆ ತೋರಿಸಿರುವುದು ಮತ್ತು ಕೇಂದ್ರ ಸರ್ಕಾರ ಇವರನ್ನು ಗುರುತಿಸಿರುವುದು ಜಿಲ್ಲೆಗೆ ಸಂದ ಗೌರವ ಎಂದರು.
ಕೇಪು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶಸ್ವಿನಿ ಶಾಸ್ತ್ರೀ, ಉಪಾಧ್ಯಕ್ಷ ರಾಘವ ಸಾರಡ್ಕ, ಸದಸ್ಯರಾದ ಪುರುಷೋತ್ತಮ ಕಲ್ಲಂಗಳ, ಜಗಜೀವನ್ ರಾಮ್ ಶೆಟ್ಟಿ, ಜಯಶೀಲ ಅಮೈ, ನಿಕಟ ಪೂರ್ವ ಅಧ್ಯಕ್ಷ ತಾರಾನಾಥ ಆಳ್ವ, ಜಿಲ್ಲಾ ಪಂಚಾಯಿತಿ ನಿಕಟ ಪೂರ್ವ ಸದಸ್ಯ ಜಯಶ್ರೀ ಕೋಡಂದೂರು, ಓಬಿಸಿ ಮೋರ್ಚಾದ ಜಿಲ್ಲಾಧ್ಯಕ್ಷ ಆರ್.ಸಿ.ನಾರಾಯಣ, ರಾಜೀವ ಭಂಡಾರಿ, ಹರಿಪ್ರಸಾದ್ ಯಾದವ್, ರಾಜೇಶ್ ಕರವೀರ, ದಯಾನಂದ ಉಜಿರೆಮಾರು, ಜನಾರ್ದನ ಭಟ್ ಅಮೈ, ಬಂಟ್ವಾಳ ಕ್ಷೇತ್ರ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ, ರವೀಶ್ ಶೆಟ್ಟಿ ಕರ್ಕಳ, ಕಾರ್ಯದರ್ಶಿ ರಮಾನಾಥ ರಾಯಿ, ಪ್ರಕಾಶ್ ಅಂಚನ್, ಯಶೋಧರ ಕರ್ಬೆಟ್ಟು, ಕಾರ್ತಿಕ್ ಬಲ್ಲಾಳ್ ಮೊದಲಾದ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.