ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಎಲೆಕ್ಟ್ರಿಕ್ ಬಸ್ಸುಗಳ ಕಾರ್ಯಾಚರಣೆಯಲ್ಲಿ ಆದ ವ್ಯತ್ಯಯಕ್ಕೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾರಿಗೆ ವ್ಯವಸ್ಥೆಯಲ್ಲಿ ಲೋಪವಾದರೆ ಸಹಿಸಲ್ಲ ಎಂದವರು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆಯನ್ನೂ ನೀಡಿದ್ದಾರೆ.
ಮೇ 14ರಂದು ಬೆಳಗ್ಗೆ 07:00 ರಿಂದ 11:00 ಗಂಟೆ ವರೆಗೆ ಬಿಎಂಟಿಸಿ ಘಟಕ-03ರಲ್ಲಿ ಅನುಸೂಚಿಗಳ ಕಾರ್ಯಾಚರಣೆಯಲ್ಲಿ ಉಂಟಾದ ವ್ಯತ್ಯಯಕ್ಕೆ ಸಾರಿಗೆ ಸಚಿವರು ಗರಂ ಆಗಿದ್ದು, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಿಂದ ಮಾಹಿತಿ ಪಡೆದು, ಈ ರೀತಿ ಮುಂದಿನ ದಿನಗಳಲ್ಲಿ ಆಗದಂತೆ ಎಚ್ಚರಿಕೆ ವಹಿಸುವಂತೆ ತಾಕೀತು ಮಾಡಿದ್ದಾರೆ. ವ್ಯತ್ಯಯಕ್ಕೆ ಹೊಣೆಯಾಗಿರುವ ಖಾಸಗಿ ಕಂಪನಿ TML Smart City Mobility Solutions ಜೊತೆಗಿನ ಒಪ್ಪಂದವನ್ನು ರದ್ದು ಮಾಡುವ ಬಗ್ಗೆ ಬಗ್ಗೆ ನಿರ್ದಾಕ್ಷಿಣ್ಯ ನಡೆ ಅನುಸರಿಸುವಂತೆ ನಿರ್ದೇಶನ ನೀಡಿದ್ದಾರೆ. ‘ನಮಗೆ ಸಾರ್ವಜನಿಕ ಪ್ರಯಾಣಿಕರಿಗೆ ಅಗತ್ಯ ಸೇವೆ ಒದಗಿಸುವ ಬದ್ಧತೆಯಿದ್ದು, ಆ ನಿಟ್ಟಿನಲ್ಲಿ ಯಾವೆಲ್ಲ ತುರ್ತು ಕ್ರಮ ತೆಗೆದುಕೊಳ್ಳಬೇಕೊ ಅದೆಲ್ಲವನ್ನು ಕೂಡಲೇ ಜರುಗಿಸುವಂತೆ ಸೂಚನೆ ಸಚಿವ ರಾಮಲಿಂಗಾರೆಡ್ಡಿ ನೀಡಿದ್ದಾರೆ.
ಈ ನಡುವೆ, ಕೇಂದ್ರ ಸರ್ಕಾರದ ನೀತಿಯಾದ ಈ ಎಲೆಕ್ಟ್ರಿಕ್ ಬಸ್ಸುಗಳ ಕಾರ್ಯಾಚರಣೆಗೆ ನೇರವಾಗಿ ಬಸ್ಸು ತಯಾರಿಕಾ ಕಂಪನಿಗಳಿಗೆ ಸಬ್ಸಡಿ ನೀಡುವುದರಿಂದ, ಚಾಲಕರು ಖಾಸಗಿ ಕಂಪನಿಯವರೇ ಒದಗಿಸುತ್ತಾರೆ. ಸಾರಿಗೆ ಸಂಸ್ಥೆಗಳಿಗೆ ಸಬ್ಸಿಡಿ ನೀಡಿದ್ದರೆ ಹೀಗಾಗುವುದಿಲ್ಲ. ಬಸ್ಸು ಮತ್ತು ಚಾಲಕರು ಸಾರಿಗೆ ಸಂಸ್ಥೆಗಳ ಒಡೆತನದಲ್ಲಿರುತ್ತಾರೆ. ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುತ್ತಾರೆ. ಇದಕ್ಕೂ ರಾಜ್ಯ ಸರ್ಕಾರಕ್ಕೂ ಏನೂ ಸಂಬಂಧವಿಲ್ಲ. ಖಾಸಗಿ ಚಾಲಕರ ವೇತನ ಪಾವತಿ ಕಂಪನಿ ಸಕಾಲಕ್ಕೆ ಪಾವತಿಸಬೇಕು. ಆದಾಗ್ಯೂ ಸಾರಿಗೆ ಸಚಿವರ ಸೂಚನೆ ಬಂದ ಕೂಡಲೇ ಕಾರ್ಯಪ್ರವೃತ್ತರಾದ ಸಂಸ್ಥೆಯ ಹಿರಿಯ ಅಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಿ, ಬಸ್ಸುಗಳ ಕಾರ್ಯಾಚರಣೆಗೆ ಅನುವು ಮಾಡಿಕೊಟ್ಟಿದ್ದಾರೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಭಾರತ ಸರ್ಕಾರದ ಫೇಮ್-2 ಯೋಜನೆಯಡಿಯಲ್ಲಿ 921, 12 ಮೀ. ಉದ್ದದ ಹವಾನಿಯಂತ್ರಣ ರಹಿತ Low-floor ಎಲೆಕ್ಟ್ರಿಕ್ ಬಸ್ಸುಗಳನ್ನು Gross Cost Contract (GCC) ಆಧಾರದ ಮೇಲೆ ಕಾರ್ಯಾಚರಿಸುವ ಸಂಬಂಧ M/s. TML Smart City Mobility Solutions Limited ಜೊತೆ 16-12-2022 ರಂದು ಕರಾರು ಒಪ್ಪಂದ ಮಾಡಿಕೊಂಡಿದೆ. ಅದರಂತೆ, ಚಾಲಕರ ನಿಯೋಜನೆ ಹಾಗೂ ಎಲೆಕ್ನಿಕ್ ಬಸ್ಸುಗಳ ನಿರ್ವಹಣೆ M/s. TML Smart City Mobility Solutions Limited ಹೊಣೆಯಾಗಿರುತ್ತದೆ ಹಾಗೂ ನಿರ್ವಾಹಕರ ನಿಯೋಜನೆಯು ಸಂಸ್ಥೆಯ ಜವಾಬ್ದಾರಿಯಾಗಿರುತ್ತದೆ.
ಪ್ರಥಮ ಹಂತದಲ್ಲಿ 27-12-2023 ರಂದು ಶಾಂತಿನಗರ ಘಟಕ (ಘಟಕ-03) ದಿಂದ ಎಲೆಕ್ನಿಕ್ ಬಸ್ಸುಗಳ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿತ್ತು. ಘಟಕ-03 ರಿಂದ ಸಂಪೂರ್ಣ ಎಲೆಕ್ನಿಕ್ ಬಸ್ಸುಗಳನ್ನು ಕಾರ್ಯಾಚರಿಸಲಾಗುತ್ತಿದ್ದು, ಒಟ್ಟಾರೆ 113 ಅನುಸೂಚಿಗಳನ್ನು ಕಾರ್ಯಚರಿಸಬೇಕಿದೆ. ಆದರೆ 4-05-2024 ರಂದು M/s. TML Smart City Mobility Solutions Limited ರವರ ಚಾಲಕರ ವೇತನ ಪಾವತಿಯಲ್ಲಿನ ವ್ಯತ್ಯಾಸ ದಿಂದ ಚಾಲಕರು ಪ್ರತಿಭಟನೆ ಮಾಡಿದ್ದರಿಂದ ಘಟಕ-03 ರ 27 ಪಾಳಿ ಹಾಗೂ 46 ಸಾಮಾನ್ಯ ಪಾಳಿಯಲ್ಲಿನ ಅನುಸೂಚಿಗಳ ಕಾರ್ಯಾಚರಣೆಯಲ್ಲಿ ಬೆಳಗ್ಗೆ 07:00 ರಿಂದ 11:00 ಘಂಟೆ ವರೆಗೆ ವ್ಯತ್ಯಯ ಉಂಟಾಗಿದೆ ಎಂದು ಬಿಎಂಟಿಸಿ ಮೂಲಗಳು ತಿಳಿಸಿವೆ.