ನವದೆಹಲಿ: 18ನೇ ಲೋಕಸಭೆ ಸ್ಪೀಕರ್ ಸ್ಥಾನಕ್ಕಾಗಿ NDA ಅಭ್ಯರ್ಥಿಯಾಗಿ ಓಂ ಬಿರ್ಲಾ ಅವರು ಕಣದಲ್ಲಿದ್ದಾರೆ. ಇದೇ ವೇಳೆ, ವಿರೋಧ ಪಕ್ಷಗಳ ಒಕ್ಕೂಟ ‘ಇಂಡಿಯಾ’ ಅಭ್ಯರ್ಥಿಯಾಗಿ ಕೋಡಿಕುನ್ನಿಲ್ ಸುರೇಶ್ ಸ್ಪರ್ಧೆಯೊಡ್ಡಿದ್ದಾರೆ.
ಉಪ ಸ್ಪೀಕರ್ ಸ್ಥಾನವನ್ನು ಬಿಟ್ಟುಕೊಡುವುದಾಗಿ ಎನ್ ಡಿಎ ಭರವಸೆ ನೀಡದ ಹಿನ್ನೆಲೆಯಲ್ಲಿ ವಿರೋಧಪಕ್ಷಗಳು ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿವೆ. ಸಂಸತ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸ್ಪೀಕರ್ ಸ್ಥಾನಕ್ಕಾಗಿ ಪೈಪೋಟಿ ಏರ್ಪಟ್ಟಿದ್ದು, ನಾಳೆ ಬೆಳಗ್ಗೆ 11 ಗಂಟೆಗೆ ಮತದಾನ ನಡೆಯಲಿದೆ.
ಬಿರ್ಲಾ ಅವರ ಪ್ರತಿಸ್ಪರ್ಧಿಯಾಗಿರುವ ಕೇರಳದ ಮಾವೆಲಿಕರಾ ಕ್ಷೇತ್ರದಿಂದ ಎಂಟು ಬಾರಿ ಸಂಸದರಾಗಿರುವ ಕೋಡಿಕುನ್ನಿಲ್ ಸುರೇಶ್ ಅವರ ಸ್ಪರ್ಧೆ ತೀವ್ರ ಕುತೂಹಲ ಕೆರಳಿಸಿದೆ.
ಈ ಬೆಳವಣಿಗೆ ನಡುವೆಯೇ, ಸಭಾಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ತಮ್ಮ ಪಕ್ಷಗಳ ಸಂಸದರು ಕಡ್ಡಾಯವಾಗಿ ಸದನದಲ್ಲಿ ಹಾಜರಿರುವಂತೆ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ವಿಪ್ ಜಾರಿ ಮಾಡಿವೆ.