ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನ ಆತಂಕ ಹೆಚ್ಚಿದ್ದು ಸೂಕ್ತ ಮುಂಜಾಗ್ರತಾ ಕ್ರಮಕ್ಕೆ ಸರ್ಕಾರ ಸೂಚಿಸಿದೆ.
ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕೋವಿಡ್ ಸಂಪುಟ ಉಪಸಮಿತಿ ಸಭೆ ನಡೆಯಿತು. ಸಭೆಯ ಬಳಿಕ ಸುದ್ದಿಗಾರರಿಗೆ ಮಾಹಿತಿ ಒದಗಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದರು.
ಸೋಂಕಿನ ಬಗ್ಗೆ ಆತಂಕ ಪಡಬೇಕಿಲ್ಲ ಎಂದ ಸಚಿವರು, ಈ ಬಾರಿ ಹೊಸ ವರ್ಷಾಚರಣೆಗೆ ನಿರ್ಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು. ಹೊಸ ವರ್ಷ ಆಚರಣೆಗೆ ಯಾವುದೇ ನಿರ್ಬಂಧವಿಲ್ಲ. ಜನರೇ ಜನದಟ್ಟಣಿಯಲ್ಲಿ ಸೇರದಂತೆ ತಮ್ಮನ್ನು ತಾವು ಸಾಧ್ಯವಾದಷ್ಟು ನಿರ್ಬಂಧ ಹೇರಿಕೊಳ್ಳಿ ಎಂದರು.
ಜ್ವರ, ಕೆಮ್ಮು, ನೆಗಡಿ, ಶೀತ, ಗಂಟಲು ನೋವು ಬಂದರೆ ಮನೆಯಲ್ಲಿಯೇ ಉಳಿದುಕೊಳ್ಳಿ ಎಂದ ಸಚಿವ ದಿನೇಶ್ ಗುಂಡೂರಾವ್, ಇದು ಖಾಸಗಿ ವಲಯಕ್ಕೂ ನಿಯಮ ಅನ್ವಯವಾಗುತ್ತದೆ, ಕಡ್ಡಾಯವಾಗಿ ಉದ್ಯೋಗಿಗಳಿಗೆ ಕೋವಿಡ್ ರಜೆ ನೀಡಬೇಕು ಎಂದರು.






















































