ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಸಂಪುಟಕ್ಕೆ ಸೇರ್ಪಡೆಯಾಸದ ನೂತನ ಸಚಿವರಿಗೆ ಗಣಿ ಮತ್ತು ಭೂ ವಿಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ಆರ್.ನಿರಾಣಿ ಅವರು ಅಭಿನಂದಿಸಿದ್ದಾರೆ.
ನೂತನ ಸಚಿವರಾದ ರಾಜೀವ್ ಚಂದ್ರಶೇಖರ್, ಶೋಭಾ ಕರಂದ್ಲಾಜೆ, ಎ.ನಾರಾಯಣಸ್ವಾಮಿ, ಭಗವಂತ ಖೂಬಾ ಅವರುಗಳಿಗೆ ಶುಭ ಕೋರಿದ್ದಾರೆ.
ಕೇಂದ್ರದಲ್ಲಿ ಸಚಿವರಾಗಿ ಮಹತ್ವದ ಜವಾಬ್ದಾರಿ ವಹಿಸಿಕೊಂಡಿರುವ ನಾಲ್ವರು ಸಚಿವರು ಕರ್ನಾಟಕದ ನೆಲ,ಜಲ, ಭಾಷೆ, ಇತಿಹಾಸ, ಸಂಸ್ಕೃತಿ ಸೇರಿದಂತೆ ಕರ್ನಾಟಕದ ಯಾವುದೇ ವಿಷಯದಲ್ಲೂ ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸಬೇಕೆಂದು ಮನವಿ ಮಾಡಿದ್ದಾರೆ.
ವಿಶೇಷವಾಗಿ ಕರ್ನಾಟಕದ ನೀರಾವರಿ, ರೈಲ್ವೆ, ಅರಣ್ಯ ಮತ್ತು ಪರಿಸರ, ನಾಗರಿಕ ವಿಮಾನಯಾನ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕೃಷಿ ಸೇರಿದಂತೆ ಮತ್ತಿತರ ಇಲಾಖೆಗಳಲ್ಲಿ ಬಾಕಿ ಇರುವ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಪ್ರಾಮಾಣಿಕ ಕೆಲಸ ಮಾಡಬೇಕೆಂದು ಹೇಳಿದ್ದಾರೆ.
ಎ.ನಾರಾಯಣ ಸ್ವಾಮಿ, ಕರಂದ್ಲಾಜೆ ಈಗಾಗಲೇ ಸಚಿವರಾಗಿ ಕೆಲಸ ಮಾಡಿರುವ ಅನುಭವವಿದೆ. ಅದೇ ರೀತಿ ರಾಜೀವ್ ಚಂದ್ರಶೇಖರ್ ಮತ್ತು ಭಗವಂತ ಖೂಬಾ ಅವರಿಗೂ ರಾಜ್ಯದ ಪ್ರಚಲಿತ ವಿದ್ಯಾಮಾನಗಳ ಬಗ್ಗೆಯೂ ಅರಿವಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಚಿವ ಸಂಪುಟದ ಎಲ್ಲರೂ ರಾಜ್ಯದ ವಿಷಯದಲ್ಲಿ ಪಕ್ಷಬೇಧ ಮರೆತು ಸಹಕಾರ ನೀಡುತ್ತೇವೆ. ಸಂಸತ್ತಿನ ಒಳಗೂ ಮತ್ತು ಹೊರಗು ರಾಜ್ಯದ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ನಿಮ್ಮಿಂದಾಗಲಿ. ಯಾವುದೇ ಸಂದರ್ಭದಲ್ಲೂ ನಾವು ಕೂಡ ಕೇಂದ್ರಕ್ಕೆ ಕೈ ಜೋಡಿಸಲು ಸಿದ್ದರಿದ್ದೇವೆ. ನಿಮ್ಮಿಂದ ರಾಜ್ಯಕ್ಕೆ ಹೆಚ್ಚಿನ ನೆರವಾಗಲಿ ಎಂದು ನಿರಾಣಿ ಆಶಿಸಿದ್ದಾರೆ.