ಮಂಗಳೂರು: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೆಲವೇ ನಗರಗಳಿಗೆ ಸೀಮಿತವಾಗಿದ್ದ ನೈಟ್ ಕರ್ಫ್ಯೂ ಬುಧವಾರ ರಾತ್ರಿಯಿಂದ ರಾಜ್ಯಾದ್ಯಂತ ವೊಸ್ತರಣೆಯಾಗಿದೆ. ಇದೇ ವೇಳೆ, ದಕ್ಷಿಣ ಕನ್ನಡದಲ್ಲಿ ಕಳೆದ 11 ದಿನಗಳಿಂದ ಮಂಗಳೂರು ನಗರಕ್ಕೆ ಸೀಮಿತವಾಗಿದ್ದ ರಾತ್ರಿ ಕರ್ಫ್ಯೂ ಇದೀಗ ಇಡೀ ಜಿಲ್ಲೆಗೆ ವಿಸ್ತಾರವಾಗಿದೆ. ರಾತ್ರಿ 10ರ ಬದಲಿಗೆ ರಾತ್ರಿ 9ರಿಂದಲೇ ಪ್ರಾರಂಭಗೊಂಡು ಬೆಳಗ್ಗೆ 6ರ ವರೆಗೆ ಕರಾವಳಿಯಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ.
ನೈಟ್ ಕರ್ಫ್ಯೂ ಹಿನ್ನೆಲೆಯಲ್ಲಿ ಕರಾವಳಿಯಾದ್ಯಂತ ವಾಹನ ಸಂಚಾರ ನಿಯಂತ್ರಿಸಲಾಗಿತ್ತು. ಜನರ ಓಡಾಟಕ್ಕೂ ಬ್ರೇಕ್ ಬಿದ್ದಿತ್ತು.
ಕರ್ಫ್ಯೂ ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು ಬುಧವಾರ ರಾತ್ರಿ 8 ಗಂಟೆಯಿಂದಲೇ ವಾಹನಗಳ ಓಡಾಟ ಕಡಿಮೆಯಾಗಿತ್ತು. ಕರಾವಳಿಯ ಬಹುತೇಕ ಕಡೆ ಬುಧವಾರ ರಾತ್ರಿ 8 ಗಂಟೆಗೂ ಮೊದಲೇ ವಾಣಿಜ್ಯ ಚಟುವಟಿಕೆಗಳು ಬಂದ್ ಆಗಿದ್ದವು.
ಈ ನಡುವೆ, ರಾತ್ರಿ ಕರ್ಫ್ಯೂ ಪರಿಣಾಮಕಾರಿ ಜಾರಿಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಆಯಕಟ್ಟಿನ ಪ್ರದೇಶಗಳಲ್ಲಿ ಒಟ್ಟು 75 ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ. ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿ 45 ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ 30 ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಿ ಆ ಪ್ರದೇಶಗಳಲ್ಲಿ ಪೊಲೀಸ್ ಕಣ್ಗಾವಲು ಹಾಕಲಾಗಿತ್ತು.