ಹುಬ್ಬಳ್ಳಿ: ಇತ್ತೀಚೆಗೆ ಹತ್ಯೆಗೀಡಾದ ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿ ನೇಹಾ ಮನೆಗೆ ಆರ್.ಅಶೋಕ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಸಾಂತ್ವನ ಹೇಳಿದರು.
ನಂತರ ಮಾತನಾಡಿದ ಆರ್.ಅಶೋಕ, ಲವ್ ಜಿಹಾದ್‌ನಿಂದ ನೇಹಾ ಕೊಲೆಗೀಡಾಗಿದ್ದು, ಅವರಿಗೆ ನ್ಯಾಯ ಕೊಡಿಸುತ್ತೇನೆ. ಈ ಕುರಿತು ಸದನದಲ್ಲೂ ಮಾತನಾಡುತ್ತೇನೆ. ಬಸ್ ಟಿಕೆಟ್‌ನಿಂದ ಹಾರ ಹಾಕುವ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಹೆಣ್ಣುಮಕ್ಕಳನ್ನು ಕೊಂದು ಹಾರ ಹಾಕುವ ಬಗ್ಗೆ ಉತ್ತರ ನೀಡಲಿ ಎಂದರು.
ನೇಹಾ ಹತ್ಯೆ ತನಿಖೆಯಲ್ಲಿ ಪೊಲೀಸರು ಕಾನೂನು ಪ್ರಕ್ರಿಯೆ ಪಾಲಿಸಿಲ್ಲ. ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳದೆ ಜೈಲಿಗೆ ಕಳುಹಿಸಲಾಗಿದೆ. ತಪ್ಪಿಸಿಕೊಳ್ಳಲು ಪೊಲೀಸರೇ ಅವಕಾಶ ಮಾಡಿದ್ದಾರೆ. ಲವ್ ಜಿಹಾದ್ ಮುಚ್ಚಿಹಾಕಲು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕ ಮಾಡಿಲ್ಲ, ಸಿಐಡಿಗೆ ಕೊಟ್ಟು ವಿಳಂಬ ಮಾಡಲಾಗಿದೆ. ಗಲ್ಲು ಶಿಕ್ಷೆ ವಿಧಿಸಲು ಸೂಕ್ತ ಸಾಕ್ಷಿಗಳು ಬೇಕು. ಅದಕ್ಕಾಗಿ ಸರಿಯಾದ ದಾಖಲೆಗಳನ್ನು ಸಂಗ್ರಹಿಸಬೇಕು. ಆರೋಪಿ ಯಾರ ಜೊತೆ ಏನು ಮಾತಾಡಿದ್ದಾನೆ ಎಂಬುದನ್ನು ತನಿಖೆ ಮಾಡಿ ಘಟನೆಗೆ ಕಾರಣರಾದವರನ್ನೂ ಬಂಧಿಸಬೇಕು. ಇವ್ಯಾವುದನ್ನೂ ಮಾಡದ ಪೊಲೀಸರು ಕೆಲವು ತಿಂಗಳು ಕಳೆದ ನಂತರ ಪ್ರಕರಣ ಮುಚ್ಚಿಹಾಕುವ ಅನುಮಾನವಿದೆ ಎಂದರು.